ಅಥಣಿ(ಬೆಳಗಾವಿ): ವರ್ಷಧಾರೆಯ ರುದ್ರನರ್ತನಕ್ಕೆ ಕೃಷ್ಣಾ ನದಿ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ವಿಪರೀತ ಏರಿಕೆಯಾಗಿದೆ. ಇದ್ರ ಪರಿಣಾಮ ಉಪನದಿಗಳಾದ ದೂದ್ಗಂಗಾ ಹಾಗೂ ವೇದಗಂಗಾ ನದಿಗಳ ಮೇಲೂ ಆಗಿದ್ದು ನೀರಿನಮಟ್ಟ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಹೀಗಾಗಿ ತಾಲೂಕಿನಾದ್ಯಂತ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರಲ್ಲಿ ನಡುಕ ಶುರುವಾಗಿದೆ.
ಕೃಷ್ಣೆಯ ಒಳಹರಿವಿನ ಪ್ರಮಾಣ 1.40 ಲಕ್ಷ ಕ್ಯೂಸೆಕ್‌ಗಿಂತ ಅಧಿಕವಿದ್ದು, ಹಿಪ್ಪರಗಿ ಬ್ಯಾರೇಜ್ನಿಂದ 1.15 ಲಕ್ಷ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಅಥಣಿ ತಾಲೂಕಿನಲ್ಲೂ ಕೃಷ್ಣಾ ನದಿ ನೀರಿನ ಮಟ್ಟ ಹಠಾತ್ ಏರಿಕೆ ಕಂಡಿದೆ. ರೈತರ ಪಂಪ್‌ಸೆಟ್ ಹಾಗು ಇತರೆ ಸಾಮಗ್ರಿಗಳು ನೀರು ಪಾಲಾಗಿದ್ದು, ಬೆಳೆಗಳು ನಾಶವಾಗಿವೆ.
ಡಿಸಿಎಂ ಲಕ್ಷ್ಮಣ ಸವದಿ ಸ್ವಕ್ಷೇತ್ರ ಅಥಣಿ ಹಾಗೂ ತಾಲ್ಲೂಕಿನ ಸಂತ್ರಸ್ತರ ಸಮಸ್ಯೆ ಆಲಿಸುವುದರ ಬದಲು ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ನಡೆಸಿದ್ದು ಕ್ಷೇತ್ರದ ಮತದಾರರ ಅಸಮಾಧಾನಕ್ಕೂ ಕಾರಣವಾಗಿದೆ.
ದೋಣಿ ವಿಹಾರ ಬಂದ್:
ಕೃಷ್ಣೆಯೊಡಲಲ್ಲಿ ನೀರು ಹೆಚ್ಚಾದ ಹಿನ್ನೆಲೆ, ಝುಂಜರವಾಡ ಹಾಗೂ ಜಮಖಂಡಿ ತಾಲೂಕಿನ ಮುತ್ತೂರ ನಡುವೆ ಸಂಪರ್ಕ ಕಲ್ಪಿಸುತ್ತಿದ್ದ ದೋಣಿ ವಿಹಾರ ಬಂದ್ ಮಾಡಲಾಗಿದೆ.