ಬೆಳಗಾವಿ : ಲಾಕ್‌ಡೌನ್ ಮಧ್ಯೆಯೂ ಅನಗತ್ಯವಾಗಿ ಜನರ ಓಡಾಟ ಹಿನ್ನೆಲೆ ಖುದ್ದು ಫೀಲ್ಡ್‌ಗಿಳಿದ ಡಿಸಿಪಿ ವಿಕ್ರಂ ಆಮಟೆ ಅವರಿಂದ ವಾಹನಗಳ ತಪಾಸಣೆ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.
ಬೆಳಗ್ಗೆಯಿಂದಲ್ಲೂ ವಾಹನ ಸವಾರರ ಓಡಾಟ ಹೆಚ್ಚಳವಾಗಿದ್ದರಿಂದ ಚೆನ್ನಮ್ಮ ವೃತ್ತದಲ್ಲಿ ಸ್ವತಃ ಫೀಲ್ಡಿಗಿಳಿದ ಡಿಸಿಪಿ ವಿಕ್ರಂ ಆಮಟೆ ಅವರು ವಾಹನಗಳ ತಪಾಸಣೆ ನಡೆಸಿ ಅನಗತ್ಯ ಓಡಾಡುತ್ತಿರುವ ವಾಹನಗಳು,100ಕ್ಕೂ ಹೆಚ್ಚು ಬೈಕ್‌ಗಳನ್ನ ಸೀಜ್ ಮಾಡಿದ್ದಾರೆ.
ಪೊಲೀಸರ ತೀವ್ರ ತಪಾಸಣೆ ಹಿನ್ನೆಲೆ ಚೆನ್ನಮ್ಮ ವೃತ್ತದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾರ್ವಜನಿಕರ ಓಡಾಟ ಮಾತ್ರ ಕಡಿಮೆ ಆಗುತ್ತಿಲ್ಲ.
ತಂದೆಯ ಐಡಿ ತಗೆದುಕೊಂಡು ರಸ್ತೆಗಿಳಿದಿದ್ದ ವಲಯ ಅರಣ್ಯಾಧಿಕಾರಿ ಪುತ್ರನ ಬೈಕ್ ಸೀಜ್ : ಅನಗತ್ಯವಾಗಿ ಓಡಾಡುತ್ತಿರುವ ಜನರಿಗೆ ತೀವ್ರ ಬಿಸಿ ಮುಟ್ಟಿಸುತ್ತಿರುವ ಪೊಲೀಸರು ತಂದೆಯ ಐಡಿ ತೆಗೆದುಕೊಂಡು ರಸ್ತೆಗಿಳಿದಿದ್ದ ವಲಯ ಅರಣ್ಯಾಧಿಕಾರಿ ಪುತ್ರನ ಬೈಕ್ ಸೀಜ್ ಮಾಡಿದರು.
ಈ ವೇಳೆ ನಾನು ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಐಡಿಕಾರ್ಡ್ ಬದಲು ತಂದೆಯ ಐಡಿ ಕಾರ್ಡ್ ತಂದಿದ್ದೇನೆ, ಬೈಕ್ ಬಿಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡರು.
ಇದ್ಯಾವುದಕ್ಕೂ ಜಗ್ಗದ ಪೊಲೀಸರು ಬೈಕ್ ಸೀಜ್ ಮಾಡಿ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದರು. ಇದಲ್ಲದೇ ಆಟೋ ಮೇಲೆ ಕೋವಿಡ್-19 ಎಮರ್ಜೆನ್ಸಿ ಅಂತ ಅಂಟಿಸಿಕೊಂಡಿದ್ದ ಚಾಲಕನಿಗೂ ಕ್ಲಾಸ್ ತೆಗೆದುಕೊಂಡ ಡಿಸಿಪಿ ಆಟೋ ಮೇಲೆ ಅಂಟಿಸಿದ್ದ ಪೇಪರ್ ಪ್ರಿಂಟ್‌ಔಟ್‌ನ ತೆಗೆಸಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಪೊಲೀಸರಿಂದ ವಾಹನಗಳ ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಮಾಸ್ಕ್ ಧರಿಸದೇ ಸರ್ಕಾರಿ ಜೀಪ್‌ನಲ್ಲಿ ಬೆಳಗಾವಿ ತಹಶೀಲ್ದಾರ್ ಆರ್.ಕೆ.ಕುಲಕರ್ಣಿ ಆಗಮಿಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಂದ 'ಸರ್ ಮಾಸ್ಕ್ ಎಲ್ಲಿ?' ಎಂದು ಪ್ರಶ್ನೆ ಮಾಡಿದಾಗ ಇದೇ ಇದೇ' ಎನ್ನುತ್ತಲ್ಲೇ ಗಡಿಬಿಡಿಯಿಂದ ಮಾಸ್ಕ್ ಧರಿಸಿದರು. ಜನರಿಗೆ ತಿಳುವಳಿಕೆ ಹೇಳಬೇಕಾದ ತಹಶೀಲ್ದಾರ್ ಅವರೇ ಮಾಸ್ಕ್ ಹಾಕಿಕೊಳ್ಳದೇ ಸಂಚಾರ ಮಾಡಿದರೆ ಹೇಗೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.