ಬೆಳಗಾವಿ: ಎಲ್ಲರೂ ಪಣ ತೊಟ್ಟು ಸಾರಿಗೆ ಇಲಾಖೆಯನ್ನು ಲಾಭದಾಯಕವಾಗಿ ಮುನ್ನೆಡೆಸಲು, ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದ ವತಿಯಿಂದ, ಬೈಲಹೊಂಗಲದ ನೂತನ ಬಸ್ ಘಟಕದ ಉದ್ಘಾಟನೆ ಮತ್ತು ನೂತನ ಬಸ್ ನಿಲ್ದಾಣದ ಶಂಕು ಸ್ಥಾಪನೆ ಹಾಗೂ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಾಲಕರು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕು. ಯಾರಿಂದ ಯಾವ ಕೆಲಸ ಮಾಡಲು ಸಾಧ್ಯವಾಗುತ್ತದೆಯೋ, ಅವರಿಂದ ಅದೇ ಕೆಲಸ ಮಾಡಿಸಬೇಕು ಎಂದರು. 3 ಸಾವಿರ ಹೊಸ ಬಸ್ಗಳನ್ನು ಖರೀದಿಸುವ ಪ್ರಸ್ತಾಪವಿದ್ದು, ಮಾರ್ಚ್ ತಿಂಗಳಲ್ಲಿ ಬಿಎಸ್ 6 ಇಂಜಿನ್ ಹೊಂದಿರುವ 1,300 ಬಸ್ಗಳು ಬರಲಿವೆ. ಹಾಗಾಗಿ ಎಲ್ಲರೂ ಖಾಸಗಿ ವಾಹನ ಬಿಟ್ಟು ಸರ್ಕಾರಿ ಬಸ್ಗಳನ್ನು ಉಪಯೋಗಿಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಇಲಾಖೆಯಲ್ಲಿ ಸುಮಾರು 3 ಸಾವಿರ ಕೋಟಿಯಷ್ಟು ಹಾನಿಯಾಗಿದೆ. ಆ ಹಾನಿಯನ್ನು ಭರಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ. ಇಲಾಖೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಯಲು ಅಧಿಕಾರಿಗಳು, ಜಾಗೃತರಾಗಿ ಕೆಲಸ ಮಾಡಬೇಕೆಂದು ತಿಳಿಸಿದರು. ದೇಶದಲ್ಲಿ ಕರ್ನಾಟಕ ಸಾರಿಗೆಗೆ ದೊಡ್ಡ ಹಿರಿಮೆ ಇದೆ. ಆ ಹಿರಿಮೆಯನ್ನು ಹಾಗೆ ಉಳಿಸಿಕೊಂಡು ಹೋಗಬೇಕು. ವರ್ಗಾವಣೆ ಬಯಸುವರಿಗೆ ಕೌನ್ಸಲಿಂಗ್ ಮೂಲಕ ಸಮಸ್ಯೆ ಪರಿಹರಿಸಲು, ಹೊಸ ಕಾನೂನು ತರಲು ಪ್ರಯತ್ನ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.
ಇನ್ನು, 2015 ರಿಂದ 2017 ಸಾಲಿನಲ್ಲಿ ಅಪಘಾತ ರಹಿತ ಬಸ್ ಚಾಲನೆ ಮಾಡಿದ, ಸುಮಾರು 157 ಚಾಲಕರು ಹಾಗೂ ಚಾಲಕ ಕಂ ನಿರ್ವಾಹಕರಿಗೆ ಬೆಳ್ಳಿ ಪದಕ ವಿತರಿಸಲಾಯಿತು.