ಬೆಳಗಾವಿ: ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಕಲಹ ತಂದ ಆರೋಪ ಹೊತ್ತಿರುವ ಶಿವಾನಂದ ವಾಲಿಯನ್ನು ಮಾಳಮಾರುತಿ ಠಾಣೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬೆಳಗಾವಿ 2ನೇ ಜೆಎಂಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಶಿವಾನಂದ ವಾಲಿ ಅ.12ರವರೆಗೂ ಪೊಲೀಸರ ಕಸ್ಟಡಿಯಲ್ಲಿರಲಿದ್ದಾನೆ. ಕಲ್ಯಾಣ್ ಪತ್ನಿ ಅಶ್ವಿನಿ ಹಾಗೂ ಪೋಷಕರನ್ನು ಪುಸಲಾಯಿಸಿ ಲಕ್ಷಾಂತರ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಾಳಮಾರುತಿ ಠಾಣೆಯಲ್ಲಿ ಕೆ.ಕಲ್ಯಾಣ ದೂರು ದಾಖಲಿಸಿದ್ದರು. ಠಾಣೆಗೆ ಕರೆದೊಯ್ದಿರುವ ಮಾಳಮಾರುತಿ ಪೊಲೀಸರು ಇಂದು ಸಂಜೆ ಆರೋಪಿ ಶಿವಾನಂದ ವಾಲಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕೆ.ಕಲ್ಯಾಣ್ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ಶಿವಾನಂದ ವಾಲಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದರು. ಈತ ಮಾಟ ಮಂತ್ರದ ಹೆಸರಿನಲ್ಲಿ ರಾಜ್ಯದ ಹಲವು ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರ್ಟ್ಗೆ ಪೊಲೀಸರು ಮನವಿ ಮಾಡಿದ್ದರು. ಈದೀಗ ಪೊಲೀಸರ ಮನವಿಯಂತೆ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಆರೋಪಿ ಶಿವಾನಂದ ವಾಲಿ, ಕೆ.ಕಲ್ಯಾಣ್ ಪತ್ನಿ, ಅತ್ತೆ, ಮಾವರಿಂದ ಒಂದು ಕೋಟಿಗೂ ಹೆಚ್ಚು ಹಣ, ಆಸ್ತಿ ವರ್ಗಾವಣೆ ಆರೋಪವಿದ್ದು, ಈಗಾಗಲೇ 45 ಲಕ್ಷ ಹಣ ತನ್ನ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಂಡಿದ್ದ. ಶಿವಾನಂದ ವಾಲಿ ಜಾಯಿಂಟ್ ಪ್ರಾಪರ್ಟಿ ತನ್ನ ಹೆಸರಿಗೆ ಖರೀದಿ ಮಾಡಿಕೊಂಡಿದ್ದಾನೆ. ಇದಲ್ಲದೇ ಈತ ಇನ್ನೂ ಹಲವರಿಗೆ ಇದೇ ರೀತಿ ವಂಚನೆ ಮಾಡಿರುವ ಶಂಕೆ ಹಿನ್ನೆಲೆ ಹೆಚ್ಚಿನ ವಿಚಾರಣೆಗೆ ಶಿವಾನಂದ ವಾಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.