ಬೆಳಗಾವಿ: ಗೋಕಾಕ್ ತಾಲೂಕಿನ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋತದಾರ್ ಸಹೋದರರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 35ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಬೆಳಗಾವಿ ತಾಲೂಕಿನ ಕಣಬರಗಿಯ ಸಿದ್ಧಾರ್ಥ ಚಾಂಗದೇವ್, ಪ್ರದೀಪ್ ಬೂಶಿ, ಮಾರುತಿ ಸಾಳುಂಕೆ, ಸೌರಭ್ ಮಾಲಾಯಿ, ಮಹಾರಾಷ್ಟ್ರದ ಸೋನೋಲಿ ಗ್ರಾಮದ ನಿವೃತ್ತಿ ಮುತಕೇಕರ್, ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮದ ಅನೀಲ್ ಪತ್ತಾರ, ಮಹಾರಾಷ್ಟ್ರ ಚಂದಗಡ ತಾಲೂಕಿನ ಶಿನ್ನೋಳಿ ಗ್ರಾಮದ ಪಂಕಜ್ ಖಾಂಡೇಕರ್, ಬೆಳಗಾವಿ ತಾಲೂಕಿನ ಕುದುರೆಮನಿ ಗ್ರಾಮದ ವಿಜಯ್ ಕದಂ, ಸಾಗರ್ ಪಾಟೀಲ್, ಮಹಾರಾಷ್ಟ್ರದ ತುರಕೇವಾಡಿ ಗ್ರಾಮದ ಮನೋಹರ್ ಸೋನಾರ್ ಸೇರಿ 10ಜನ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣ ಹಿನ್ನೆಲೆ.. ಸೆ.17ರಂದು ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯ ಲೋಳಸೂರಿನ ಕರೆಮ್ಮದೇವಿ ಗುಡಿಯ ಬಳಿ 8ಜನ ಆರೋಪಿಗಳು ಸಂಜೀವ್ ಪೋತದಾರ್ ಹಾಗೂ ಸದಾನಂದ ಪೋತದಾರ್ ಎಂಬ ಇಬ್ಬರು ಚಿನ್ನದ ವ್ಯಾಪಾರಿಗಳನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿ 500ಗ್ರಾಂ ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ದೂರಿನ ಮೇರೆಗೆ ಗೋಕಾಕ್ ಡಿವೈಎಸ್‌ಪಿ ಮನೋಜ್ ಕುಮಾರ್ ನಾಯಕ್ ಅವರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.
ಘಟಪ್ರಭಾ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಿದ ವಿಶೇಷ ಪೊಲೀಸರ ತಂಡ, ಸೆ.24ರಂದು 6ಜನ ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿ 240 ಗ್ರಾಂ ಚಿನ್ನ, 44ಸಾವಿರ ರೂಪಾಯಿ ಹಣ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್‌ನ್ನು, 3ಬೈಕ್ ಗಳನ್ನು ವಶಪಡಿಸಿಕೊಂಡಿತ್ತು. ಬಳಿಕ ಮತ್ತೇ ನಾಲ್ಕು ಜನರನ್ನು ವಶಕ್ಕೆ ಪಡೆದು 71ಗ್ರಾಂ ಬಂಗಾರ ಸೇರಿದಂತೆ ಒಟ್ಟು 35ಲಕ್ಷದ 50ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ 6ಲಕ್ಷ ಮೌಲ್ಯದ ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗಾಂಜಾ ಮತ್ತಿನಲ್ಲಿ ಪುಂಡರ ಕಿರಿಕ್: ಯಾಕ್ರಪ್ಪ ಗಲಾಟೆ ಮಾಡ್ತೀರಾ ಅಂದಿದಕ್ಕೆ ಮನೆ ಮಾಲೀಕರ ಮೇಲೆ ಹಲ್ಲೆ