ಚಿಕ್ಕೋಡಿ : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೆ ಭೇಟಿ ನೀಡಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದಿದ್ದಾರೆ.
ಬಳಿಕ ಮಾತನಾಡಿದ ಅವರು, ಉತ್ತರ ಕರ್ನಾಟಕದ ಭಾಗದಲ್ಲಿ ಹುಕ್ಕೇರಿ ಹಿರೇಮಠ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. 2018 ನವೆಂಬರ್ 17ಕ್ಕೆ ಹುಕ್ಕೇರಿ ಹಿರೇಮಠದ ಸಂಕಲ್ಪ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಟ್ಟಿರುವುದು ಅಭಿಮಾನದ ಸಂಗತಿ.
ಒಬ್ಬ ಕಾವಿದಾರಿ ಸಂಕಲ್ಪ ಮಾಡಿದರೆ ದೇಶವು ಕೂಡ ಬದಲಾಗಬಹುದು ಎನ್ನುವುದಕ್ಕೆ ನಿದರ್ಶನ ಹುಕ್ಕೇರಿ ಶ್ರೀಗಳ ಕಾರ್ಯ. ಇನ್ನೂ ಅನೇಕ ಕಾರ್ಯಗಳನ್ನು ನಾನು ಕೇಳಿದ್ದೇನೆ. ಶ್ರೀಗಳ ಕಾರ್ಯ ಇಡೀ ಕರ್ನಾಟಕ ಅಷ್ಟೇ ಅಲ್ಲ, ದೇಶ ಹೊರದೇಶಗಳಲ್ಲಿಯೂ ಕೂಡ ಜನಜನಿತವಾಗಿದೆ. ನಾವೆಲ್ಲರೂ ಕೂಡ ಧರ್ಮಯುತ ರಾಜಕಾರಣವನ್ನು ಮಾಡಿದರೆ ಖಂಡಿತ ಭಾರತ ವಿಶ್ವಗುರುವಾಗುವಲ್ಲಿ ಸಂಶಯವಿಲ್ಲ ಎಂದರು.
ನಂತರ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಂಸ್ಕಾರಯುತ ಮನೆತನದಿಂದ ಬಂದಿರುವ ತೇಜಸ್ವಿಸೂರ್ಯ ಅತಿ ಚಿಕ್ಕ ವಯಸ್ಸಿನಲ್ಲಿ ಸಂಸತ್ತನ್ನು ಪ್ರವೇಶಿಸಿರುವುದು ಖುಷಿಯ ಸಂಗತಿ. ಹೆಚ್ಚು ಹೆಚ್ಚು ಕೆಲಸವನ್ನು ಮಾಡುವುದರೊಂದಿಗೆ ಕರುನಾಡಿನ ಕೀರ್ತಿಯನ್ನು ದೆಹಲಿಗೆ ತಲುಪಿಸಿ ಹೆಚ್ಚು ಕಾರ್ಯವನ್ನು ಮಾಡಲಿ ಎಂದರು.