ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸ್ಥಳೀಯ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯ ವಿದ್ಯಾರ್ಥಿನಿ ಜೊತೆ ಶಿಕ್ಷಕನೋರ್ವ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಶಿಕ್ಷಕನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಖಾಸಗಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯ ಮೈ ಮುಟ್ಟುವುದು ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಬಿ.ಆರ್ ಬಾಡಕರ್ ಎಂಬ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿ ಡಿ.23 ರಂದು ದೂರು ನೀಡಿದ್ದಾರೆ.
ಶಿಕ್ಷಕ ಬಿ.ಆರ್ ಬಾಡಕರ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿರುವುದು ಮತ್ತು ಲೈಂಗಿಕ ದೌರ್ಜನ್ಯ ನಡೆಸಿರುವುದು ಮಾತ್ರವಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಇಂಟರ್ನಲ್ ಪರೀಕ್ಷೆ ಅಂಕ ಕಡಿತಗೊಳಿಸುವ ಬೆದರಿಕೆ ಹಾಕಿದ್ದರಂತೆ. ಇನ್ನು, ಶಿಕ್ಷಕನ ಈ ಕೃತ್ಯಕ್ಕೆ ಸಹಕರಿಸಿದ್ದಾನೆ ಎಂದು ಅದೇ ಶಾಲೆಯ ಇನ್ನೋರ್ವ ಶಿಕ್ಷಕ ಕೆ.ಎಂ ಕೋಳಿ ಎಂಬುವರ ವಿರುದ್ಧವೂ ದೂರು ನೀಡಲಾಗಿದೆ.
ಆರೋಪಿತರ ಮೇಲೆ ಐಪಿಸಿ ಸೆಕ್ಷನ್ 354 (ಎ), 109, 506 ರ ಅಡಿಯಲ್ಲಿ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ.. ಕೋಲು, ಕಸಬರಿಗೆ ಹಿಡಿದು ಶಿಕ್ಷಕನಿಗೆ ಥಳಿಸಿದ ಹೆಣ್ಮಕ್ಕಳು!