ಬೆಳಗಾವಿ : ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಳೇಭಾವಿ ಗ್ರಾಮದಲ್ಲಿ ಅ 6ರಂದು ನಡೆದಿದ್ದ ಡಬಲ್ ಮರ್ಡರ್ ಪ್ರಕರಣದಲ್ಲಿ ಮಹೇಶ್ ಮುರಾರಿ, ಪ್ರಕಾಶ್ ಹುಂಕ್ರಿ ಪಾಟೀಲ್ ಎಂಬವರ ಹತ್ಯೆಯಾಗಿತ್ತು. ಎರಡು ಗ್ಯಾಂಗ್‌ಗಳ ನಡುವೆ ವೈಷಮ್ಯ ಉಂಟಾಗಿ ಕೊಲೆ ನಡೆದಿತ್ತು. ಈ ಸಂಬಂಧ ನಿನ್ನೆ ಹತ್ಯೆಯಲ್ಲಿ ಭಾಗಿಯಾಗಿದ್ದ ಆರು ಜನರನ್ನು ಬಂಧಿಸಲಾಗಿದೆ. ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಪ್ರಕರಣ ಸಂಬಂಧ ಆರು ಮಂದಿಯ ಬಂಧನ: ಬಂಧಿತರನ್ನು ಬೆಳಗಾವಿ ತಾಲೂಕಿನ ಸುಳೇಭಾವಿಯ ಶಶಿಕಾಂತ ಭೀಮಪ್ಪ ಮಿಸಾಳೆ(24),ಯಲ್ಲೇಶ್ ಹುಂಕ್ರಿ ಪಾಟೀಲ್(22),ಮಂಜುನಾಥ ಶಿವಾಜಿ ಪರೋಜಿ(22), ದೇವಪ್ಪ ರವಿ ಕುಕಡೊಳ್ಳಿ(26) ಹಾಗೂ ಗೋಕಾಕ್ ತಾಲೂಕಿನ ಖನಗಾಂವದ ಬಿ.ಕೆ. ಗ್ರಾಮದ ಸಂತೋಷ ಯಲ್ಲಪ್ಪ ಹಣಬರಟ್ಟಿ(20), ಭರಮಣ್ಣ ನಾಗಪ್ಪ ನಾಯಕ(20) ಎಂದು ಗುರುತಿಸಲಾಗಿದೆ.
ಬಂಧಿತರ ಪೈಕಿ ನಾಲ್ವರು ಸುಳೇಭಾವಿ ಗ್ರಾಮದವರು, ಇಬ್ಬರು ಖನಗಾಂವ ಗ್ರಾಮದವರು. ಮೊದಲು ಇವರೆಲ್ಲರೂ ಒಂದೇ ಗ್ಯಾಂಗ್‌ನಲ್ಲಿದ್ದರು. ಐದು ತಿಂಗಳ ಹಿಂದೆಯಷ್ಟೇ ಎರಡು ಗುಂಪುಗಳಾಗಿ ವೈಷಮ್ಯ ಬೆಳೆದಿತ್ತು. ಇನ್ನು ಮಹೇಶ್ ಮುರಾರಿ ಗ್ಯಾಂಗ್ ನವರು ನಮಗೆ ಬೆದರಿಕೆ ಹಾಕುತ್ತಿದ್ದರು. ನಮಗೆ ಏನಾದರೂ ಮಾಡಬಹುದು ಎಂದು ಕೊಲೆ ಮಾಡಿರುವುದಾಗಿ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದರು.
ಕರ್ತವ್ಯ ಲೋಪದ ಹಿನ್ನಲೆ ಇಬ್ಬರು ಪೊಲೀಸರ ಅಮಾನತು: ಇನ್ನು ಕೊಲೆ ಮಾಡುವ ವೇಳೆ ಖಾರದ ಪುಡಿ ಎರಚಿದ ಬಗ್ಗೆ ಗಮನಕ್ಕೆ ಬಂದಿಲ್ಲ.ಕೊಲೆಯಾದವರು ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡ್ತಿದ್ದ ಬಗ್ಗೆ ನಮಗೆ ತಿಳಿಯಿತು. ಪ್ರಕರಣ ಸಂಬಂಧ ಕರ್ತವ್ಯ ವೇಳೆ ಬೇಜವಾಬ್ದಾರಿ ತೋರಿದ ಆರೋಪದಡಿ ಇಬ್ಬರು ಬೀಟ್ ಪೊಲೀಸರನ್ನು ನಗರ ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ ಎಂದು ಡಿಸಿಪಿ ರವೀಂದ್ರ ಗಡಾದಿ ಹೇಳಿದರು.
ಇದನ್ನೂ ಓದಿ : ಸುಳೇಭಾವಿ ಜೋಡಿ ಕೊಲೆ ಪ್ರಕರಣ: ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಅಮಾನತು