ಬೆಳಗಾವಿ: ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕಳೆದ ಹಲವು ದಶಕಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಅನೇಕ ಸರ್ಕಾರಗಳು ಬಂದು ಹೋದರೂ ರೈತರ ಕೂಗು ಆಳುವ ಸರ್ಕಾರಗಳಿಗೆ ಮಾತ್ರ ಕೇಳುತ್ತಿಲ್ಲ. ಈಗ ಮತ್ತೆ ವಿಧಾನಸಭೆ ಚುನಾವಣೆ ಬಂದಿದೆ, ಮತದಾರರಿಗೆ ಹಲವು ರೀತಿಯ ಆಮಿಷ ತೋರಿಸುತ್ತಿರುವ ರಾಜಕೀಯ ಪಕ್ಷಗಳು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ ಎಂಬ ಬಗ್ಗೆ ಚಕಾರ ಎತ್ತದಿರುವುದು ಬೆಳಗಾವಿ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
3 ಲಕ್ಷ ಹೆಕ್ಟೇರ್ನಲ್ಲಿ ಕಬ್ಬು ಬೆಳೆ: ಹೌದು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 10 ಲಕ್ಷ ಹೆಕ್ಟೇರ್ ಭೂಮಿಯಿದ್ದು, ಈ ಪೈಕಿ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಇದರಲ್ಲಿ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಈ ಅಂಕಿ ಸಂಖ್ಯೆ ಪ್ರಕಾರ ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಕಬ್ಬು ಬೆಳೆಯುವುದು ಬೆಳಗಾವಿ ಜಿಲ್ಲೆಯಲ್ಲೆ. ಪ್ರಸಕ್ತ ವರ್ಷ ರಾಜ್ಯದಲ್ಲಿ ಒಟ್ಟು 6 ಕೋಟಿ 1 ಲಕ್ಷ 12,006 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಅದೇ ರೀತಿ 6 ಕೋಟಿ 26 ಲಕ್ಷ 13,935 ಮೆಟ್ರಿಕ್ ಟನ್ ಸಕ್ಕರೆ ರಾಜ್ಯದಲ್ಲಿ ಉತ್ಪಾದಿಸಲಾಗಿದೆ. ಜಿಲ್ಲೆಯಲ್ಲಿ 2 ಕೋಟಿ 9 ಲಕ್ಷ 94,484 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. 2 ಕೋಟಿ 20 ಲಕ್ಷ 38, 703 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ.
ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎನ್ನುವುದು ರೈತರ ವಾದವಾಗಿದೆ. ವರ್ಷವಿಡೀ ಬೆವರು ಸುರಿಸಿ ಸಿಹಿ ಕಬ್ಬು ಬೆಳೆಯುವ ರೈತರು ಅಂತಿಮವಾಗಿ ದರದ ಲೆಕ್ಕಾಚಾರದಲ್ಲಿ ಕಹಿ ಉಣ್ಣುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬಿಗೆ ಗುಜರಾತ್ ಮಾದರಿಯಲ್ಲಿ ದರ ನಿಗದಿ ಮಾಡಬೇಕು. ಪ್ರತಿ ಟನ್ ಕಬ್ಬಿಗೆ ಸರಾಸರಿ 3500 ರೂ. ನಿವ್ವಳ ದರ ರೈತರಿಗೆ ಸಿಗಬೇಕು ಎಂಬುದು ರೈತ ಮುಖಂಡರ ಆಗ್ರಹವಾಗಿದೆ.
ಗುಜರಾತ್ ಮಾದರಿಯಲ್ಲಿ ದರ ನಿಗದಿಗೆ ಒತ್ತಾಯ: ಕಬ್ಬಿನಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವ ಗುಜರಾತ್ ರಾಜ್ಯದಲ್ಲಿ ಪ್ರತಿ ಟನ್ ಕಬ್ಬಿಗೆ ಸರಾಸರಿ 4 ಸಾವಿರ ರೂ. ನಿವ್ವಳ ದರವನ್ನು ರೈತರಿಗೆ ನೀಡಲಾಗುತ್ತಿದೆ. ಉತ್ತರ ಪ್ರದೇಶ, ಪಂಜಾಬ್ನಲ್ಲೂ 3,500 ರೂ. ದರ ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಕಬ್ಬಿನಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು, ಉಪ ಉತ್ಪನ್ನಗಳ ಆದಾಯವೂ ಸಾಕಷ್ಟಿದೆ. ಕರ್ನಾಟಕದಲ್ಲಿ ಕಬ್ಬು ನುರಿಯುವ ಉದ್ಯಮದ ಒಟ್ಟು ವಹಿವಾಟು 59 ಸಾವಿರ ಕೋಟಿ ರೂ. ಆಗಿದೆ.
ಸಕ್ಕರೆಯ ವಹಿವಾಟು 30 ಸಾವಿರ ಕೋಟಿಯಾದರೆ ಅಬಕಾರಿ ಉತ್ಪನ್ನದ ವಹಿವಾಟೇ 20 ಸಾವಿರ ಕೋಟಿ ರೂ. ಇದೆ. ಒಂದು ಟನ್ ಕಬ್ಬಿನಿಂದ ಉತ್ಪಾದನೆಯಾಗುವ ಸ್ಪಿರಿಟ್ನಿಂದ ಸರ್ಕಾರಕ್ಕೆ ಸರಾಸರಿ 4900 ರೂ. ಆದಾಯವಾದರೆ, ಇಥೆನಾಲ್, ಪ್ರೆಸ್ ಮಡ್ ಮತ್ತಿತರ ಉಪ ಉತ್ಪನ್ನಗಳ ಆದಾಯವೂ ಸಾಕಷ್ಟಿದೆ. ಆದರೆ, ’’ಕರ್ನಾಟಕದಲ್ಲಿ ನೀಡಿದಷ್ಟು ಕಡಿಮೆ ದರ ಇನ್ನೆಲ್ಲೂ ಇಲ್ಲ. ಗುಜರಾತ್ ರಾಜ್ಯದಲ್ಲಿ ನೀಡಲಾಗುತ್ತಿರುವ ದರವನ್ನು ಮಾದರಿಯಾಗಿಟ್ಟುಕೊಂಡು ಕರ್ನಾಟಕದಲ್ಲಿಯೂ ದರ ನಿಗದಿ ಮಾಡಬೇಕು. ಸಾಗಾಟ ವೆಚ್ಚ ಕಳೆದು ರೈತರಿಗೆ ನಿವ್ವಳ ಲಾಭ ಕೈ ಸೇರುವಂತಾಗಬೇಕು. ಟೋಲ್ಗೇಟ್ಗಳಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಳಿಗೆ ಶುಲ್ಕ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕು‘‘ ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರು ಮತ್ತು ಕರ್ನಾಟಕ ಕಬ್ಬು ನಿಯಂತ್ರಣ ಮಂಡಳಿ ಸದಸ್ಯ ಸಿದಗೌಡ ಮೊದಗಿ ಆಗ್ರಹಿಸಿದ್ದಾರೆ.
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಆರ್ಥಿಕ ಸಲಹೆಗಾರ ಸಿ.ರಂಗರಾಜನ್ ವರದಿಯಲ್ಲಿ 70:30ರ ಅನುಪಾತದಲ್ಲಿ ಲಾಭಾಂಶ ವಿತರಿಸುವ ಬಗ್ಗೆ ಉಲ್ಲೇಖಿಸಿದ್ದರೂ ರೈತರಿಗೆ ಯಾವುದೇ ರೀತಿ ಲಾಭಾಂಶ ನೀಡುತ್ತಿಲ್ಲ ಎಂಬುದು ಕಬ್ಬು ಬೆಳೆಗಾರರರ ಅಸಮಾಧಾನವಾಗಿದೆ. ಕಬ್ಬಿನ ಸಾಗಣೆ ವೆಚ್ಚವನ್ನು ಕಿ.ಮೀ. ಮಾನದಂಡ ಅನುಸರಿಸಬೇಕು. ಇದರಿಂದ ಸ್ಥಳೀಯ ಕಾರ್ಖಾನೆಗಳು ಹೆಚ್ಚು ಕಬ್ಬು ಸರಬರಾಜು ಆಗಿ, ಸಕ್ಕರೆ ಉತ್ಪಾದನೆ ಜಾಸ್ತಿಯಾಗುತ್ತವೆ. ಕಾರ್ಖಾನೆಗಳಿಗೂ ಲಾಭವಾಗಲಿದೆ. ಇನ್ನು ರೈತರಿಂದ ಕಬ್ಬು ಕಟಾವು ಗ್ಯಾಂಗ್ ಗಳು ತೆಗೆದುಕೊಳ್ಳುವ ಲಗಾನಿಗೆ ಕಡಿವಾಣ ಹಾಕಬೇಕು ಎಂಬುದು ರೈತರ ಆಗ್ರಹವಾಗಿದೆ.
ರೈತ ಮುಖಂಡರು ಹೇಳುವುದೇನು?: ಹಲವು ದಶಕಗಳಿಂದ ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ಅದು ಈಗಲೂ ಮುಂದುವರೆದಿದೆ. ’’ಪ್ರತಿ ಟನ್ ಕಬ್ಬಿಗೆ ಇಳುವರಿ ಪ್ರಮಾಣ ಶೇ.12ಕ್ಕಿಂತ ಹೆಚ್ಚಿದ್ದರೂ ಹಲವಾರು ಕಾರ್ಖಾನೆಗಳಲ್ಲಿ ಇಳುವರಿ ಪ್ರಮಾಣವನ್ನೇ ಕಡಿಮೆ ತೋರಿಸಲಾಗುತ್ತಿದೆ. ಇದರಿಂದ ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರವನ್ನು ಪ್ರತಿ ಟನ್ ಕಬ್ಬಿಗೆ 3,050 ರೂ. ನಿಗದಿ ಮಾಡಿದರೂ ಎಫ್‌ಆರ್‌ಫಿ ಆಧಾರದಲ್ಲಿ ರೈತರಿಗೆ ಸೂಕ್ತ ದರ ಸಿಗುತ್ತಿಲ್ಲ. ಕಬ್ಬಿನ ತೂಕ ಮಾಡುವಾಗಲೇ ಪ್ರತಿ ಲೋಡ್ ಮೇಲೆ 1-2 ಟನ್ ಕಡಿಮೆ ತೋರಿಸುವ ಮೂಲಕ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಮಹಾಮೋಸ ಮಾಡುತ್ತಿವೆ. ಕಟಾವು ಮಾಡಿ ಸಾಗಾಟ ಮಾಡುವ ದರವನ್ನು ಸಕ್ಕರೆ ಕಾರ್ಖಾನೆಗಳು ಕಬ್ಬಿನ ಹೊಲದಿಂದ ಕಾರ್ಖಾನೆಗೆ ಇರುವ ದೂರದ ಆಧಾರದಲ್ಲಿ ನಿಗದಿ ಮಾಡಬೇಕು ಎಂದು ಸರ್ಕಾರದ ಆದೇಶವಿದೆ. ಆದರೆ, ಕಾರ್ಖಾನೆಗಳು ಒಂದೇ ದರ ನಿಗದಿ ಮಾಡುತ್ತಿವೆ. ಕಟಾವು ಮತ್ತು ಸಾಗಾಟದ ದರ ಪ್ರತಿ ಟನ್ಗೆ ಸರಾಸರಿ 750-1000 ರೂ.ವರೆಗೂ ಪಾವತಿಸಲಾಗುತ್ತಿದೆ. ಇದರಿಂದಲೂ ರೈತರಿಗೆ ವಿಪರೀತ ನಷ್ಟವಾಗುತ್ತಿದೆ‘‘ ಎಂದು ರೈತ ಮುಖಂಡ ರವಿ ಸಿದ್ದನ್ನವರ ನಮ್ಮ ಈಟಿವಿ ಭಾರತಕ್ಕೆ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
'ಇಡೀ ಸಕ್ಕರೆ ಕಾರ್ಖಾನೆಗಳು ಪ್ರಭಾವಿಗಳ ಕೈಯಲ್ಲಿವೆ. ಸರ್ಕಾರದ ಭಾಗವಾಗಿ, ಸರ್ಕಾರದ ಅಂಗವಾಗಿರುವ ಹಲವು ಶಾಸಕರು ಮತ್ತು ಸಚಿವರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದರಿಂದ ಸರ್ಕಾರಕ್ಕೆ ಅವರ ಮೇಲೆ ನಿಯಂತ್ರಣ ಮಾಡಲಾಗುತ್ತಿಲ್ಲ. ಸರ್ಕಾರವೇ ಸಕ್ಕರೆ ಮಾಲೀಕರ ಹಿಡಿತಲ್ಲಿದೆ ಎಂದು ಹೇಳಿದರೆ ತಪ್ಪಾಗಲಾರದು. ಯಾವುದೇ ಆದೇಶಗಳನ್ನು ಸರಿಯಾಗಿ ಜಾರಿ ಮಾಡಲಾಗುತ್ತಿಲ್ಲ. ಕಡಿಮೆ ಇಳುವರಿ ಕಬ್ಬು ತೆಗೆಯುವ ಗುಜರಾತ್ ಮತ್ತು ಪಂಜಾಬ್ ರಾಜ್ಯದಲ್ಲಿ ಉತ್ತಮ ಬೆಲೆ ಇದೆ. ಅತಿ ಹೆಚ್ಚು ಇಳುವರಿ ತೆಗೆಯುವ ಕರ್ನಾಟಕದಲ್ಲಿ ಕಡಿಮೆ ಬೆಲೆಗೆ ಕಬ್ಬು ಮಾರಾಟ ಮಾಡುವಂತಹ ಪರಿಸ್ಥಿತಿ ಇದೆ. ಹಾಗಾಗಿ ಸರ್ಕಾರದ ಮಾನದಂಡಗಳು ಎಲ್ಲಿ ವಿಫಲವಾಗುತ್ತಿವೆಯೋ ಅಲ್ಲಿ ಸರಿಯಾದ ಕಾನೂನು ಕ್ರಮ ಜರುಗಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕಕೊಡಬೇಕು' ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೊದಗಿ ಒತ್ತಾಯಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪ್ರಮುಖ ಬೆಳೆಯೂ ಕಬ್ಬು.. ಇಲ್ಲಿ ಇವೆ ನೂರಾರು ಸಮಸ್ಯೆ: ’’ಮಂಡ್ಯ ಜಿಲ್ಲೆಯ ಮುಖ್ಯ ಬೆಳೆ ಕಬ್ಬು. ಸದ್ಯದ ಮಾರುಕಟ್ಟೆಯಲ್ಲಿ ಒಂದು ಕಬ್ಬು ಟನ್ಗೆ 2700 ರೂ. ಬೆಲೆ ಇದೆ. ಆದರೆ, ಒಂದು ಎಕರೆ ಉಳುಮೆಗೆ ಮತ್ತು ಆಳು-ಕಾಳು, ಟ್ರ್ಯಾಕ್ಟರ್, ಕಟಾವು, ಸಾಗಣೆ ಸೇರಿದಂತೆ ಇತರ ಎಲ್ಲ ಕೆಲಸಕ್ಕೆ ಸೇರಿ 2700 ರೂಪಾಯಿಗೂ ಮೀರಿ ಖರ್ಚು ಮಾಡಲಾಗುತ್ತದೆ. ಯಾರೇ ಇರಲಿ, ವ್ಯವಹಾರ ಮಾಡುವುದು ಮತ್ತು ದುಡಿಯುವುದು ಲಾಭದ ಉದ್ದೇಶದಿಂದ. ನಾವು ದೇಶಕ್ಕೆ ಅನ್ನ ಹಾಕುವವರು, ಲಾಭ ಇಲ್ಲದಿದ್ದರೂ ನಡೆಯುತ್ತದೆ ಅನ್ನೋದನ್ನು ಒಪ್ಪಿಕೊಳ್ಳೋಣ. ಆದರೆ, ಒಂದು ಟನ್ ಕಬ್ಬಿಕೆ ವರ್ಷದಿಂದ ವರ್ಷಕ್ಕೆ ಆದಾಯಕ್ಕಿಂತ ಖರ್ಚೆ ಹೆಚ್ಚಾಗುತ್ತಿದ್ದರೆ ಮುಂದಿನ ದಿನಗಳಲ್ಲಿ ರೈತ ಎಲ್ಲಿಗೆ ಹೋಗಬೇಕು?’’ ಎಂದು ಮಂಡ್ಯ ಜಿಲ್ಲೆಯ ರೈತ ಮುಖಂಡ ಅಣ್ಣಯ್ಯ ಪ್ರಶ್ನಿಸಿದ್ದಾರೆ.
'ಆಳುವ ಸರ್ಕಾರಗಳು ರೈತರಿಗಾಗಿ ಅದು-ಇದು ಅಂತ ಸಹಾಯಧನ ಮಾಡುತ್ತಲೇ ಇವೆ. ಆದರೆ, ಯಾವೊಬ್ಬ ರೈತರ ಕೈಗೂ ಅದು ಸರಿಯಾಗಿ ಸಿಗುತ್ತಿಲ್ಲ ಅನ್ನೋದನ್ನು ಬಹಿರಂಗವಾಗಿ ಹೇಳಬೇಕಿಲ್ಲ. ಕಬ್ಬು ಬೆಲೆ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಾಗಿ ಜಿಲ್ಲೆಯಲ್ಲಿ ಇತ್ತೀಚೆಗೆ 109 ದಿನ ಹೋರಾಟ ಮಾಡಲಾಯಿತು. ಯಾರೊಬ್ಬರು ಈ ಬಗ್ಗೆ ಗಮನ ಕೊಡಲಿಲ್ಲ. ಅಲ್ಲದೇ ಈವರೆಗೂ ಒಂದು ರೂಪಾಯಿ ಕೂಡ ಹೆಚ್ಚಳ ಮಾಡಿಲ್ಲ. ಆದರೆ, ಆಳುವ ಸರ್ಕಾರಗಳು ಮಾತ್ರ ನಾವು ರೈತರ ಪರ ಇದ್ದೇವೆ ಎಂದು ಹೇಳುತ್ತಲೇ ಬಂದರು. ಇದು ಇವತ್ತಿನದ್ದಲ್ಲ, ಈ ಹಿಂದೆ ಆಳಿದ ಎಲ್ಲ ಸರ್ಕಾರದ ಕಥೆ ಕೂಡ ಇದೆಯಾಗಿದೆ. ಆದ್ದರಿಂದ ಸಮಾಜ ಎಚ್ಚೆತ್ತುಕೊಳ್ಳಬೇಕು. ತಿಳಿವಳಿಕೆಯುಳ್ಳ ಯುವಕರು, ಯುವತಿಯರು, ಮಹಿಳೆಯರು, ಪುರುಷರು, ರೈತರ ಬಗ್ಗೆ ಕಾಳಜಿ ವಹಿಸುವವರಿಗೆ ಪ್ರಾಮುಖ್ಯತೆ ನೀಡಬೇಕೆಂದು' ಮನವಿ ಮಾಡಿಕೊಂಡರು.
ಇದನ್ನೂ ಓದಿ: ಹಾವೇರಿ ಬ್ಯಾಡಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಗುಜರಾತ್ ಮೂಲದ ಪುಷ್ಪಾ ಎಂಟ್ರಿ..