ಬೆಳಗಾವಿ: ಸರ್ಕಾರ ಸಕ್ಕರೆ ನಿರ್ದೇಶನಾಲಯವನ್ನು ಕೈಗಾರಿಕಾ ಇಲಾಖೆಯೊಂದಿಗೆ ವಿಲೀನ ಮಾಡಲು ಮುಂದಾಗಿರುವ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಹೊಂದಿರುವ ಜಿಲ್ಲೆ ಬೆಳಗಾವಿ. ಈ ಕಾರಣಕ್ಕೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯವನ್ನು ಸುವರ್ಣಸೌಧಕ್ಕೆ ಶಿಫ್ಟ್ ಮಾಡಬೇಕು ಎಂಬ ರೈತರ ಬೇಡಿಕೆಗೆ ಯಡಿಯೂರಪ್ಪ ಸ್ಪಂದಿಸಿದ್ದರು. ಆದರೆ, ಕಚೇರಿ ಸ್ಥಳಾಂತರ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಇದೀಗ ಯೂಟರ್ನ್ ಹೊಡೆದಿರುವ ರಾಜ್ಯ ಸರ್ಕಾರ, ಸಕ್ಕರೆ ನಿರ್ದೇಶನಾಲಯವನ್ನು ಕೈಗಾರಿಕಾ ಇಲಾಖೆಯೊಂದಿಗೆ ವಿಲೀನ ಮಾಡಲು ಮುಂದಾಗಿದೆ.
ರಾಜ್ಯ ಸರ್ಕಾರದ ಈ ನಡೆಗೆ ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ಇಲಾಖೆಯಲ್ಲಿಯೇ ಸಕ್ಕರೆ ನಿರ್ದೇಶನಾಲಯವನ್ನು ವಿಲೀನ ಮಾಡುವಂತೆ ಹಣಕಾಸು ಇಲಾಖೆಗೆ ಸಚಿವ ಸಂಪುಟ ಉಪ ಸಮಿತಿ ಪ್ರಸ್ತಾವನೆ ಸಲ್ಲಿಸಿದೆ. ಈ ಕಾರಣಕ್ಕೆ ಸಕ್ಕರೆ ನಿರ್ದೇಶನಾಲಯ ತಾತ್ಕಾಲಿಕವಾಗಿ ಬೆಂಗಳೂರಿನಲ್ಲೇ ಮುಂದುವರೆಸುವಂತೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯಕ್ಕೆ ಸಚಿವ ಶಿವರಾಂ ಹೆಬ್ಬಾರ್ ಪತ್ರ ಬರೆದಿದ್ದಾರೆ.
ಬೆಳಗಾವಿ ಸುವರ್ಣಸೌಧಕ್ಕೆ ಸಕ್ಕರೆ ನಿರ್ದೇಶನಾಲಯ ಸ್ಥಳಾಂತರಿಸುವ ಸಂಬಂಧ ಸರ್ಕಾರವೇ ರೈತರಿಗೆ ಆಶ್ವಾಸನೆ ನೀಡಿತ್ತು. ಕಚೇರಿ ಸ್ಥಳಾಂತರದ ಮೊದಲೇ ವಿಲೀನಕ್ಕೆ ಮುಂದಾದ ಸಚಿವರ ಕ್ರಮಕ್ಕೆ ಉತ್ತರ ಕರ್ನಾಟಕ ಭಾಗದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ನಿರ್ದೇಶನಾಲಯವನ್ನು ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡುವುದರಿಂದ ಕಬ್ಬಿನ ಬಾಕಿ ಹಣ, ಕಬ್ಬು ಬೆಳೆಗಾರರ ಸಮಸ್ಯೆಗೆ ತಕ್ಷಣ ಸ್ಪಂದನೆ ಸೇರಿದಂತೆ ಈ ಭಾಗಕ್ಕೆ ಅನೇಕ ಉಪಯೋಗವಾಗುತ್ತಿದ್ದವು. ಆದರೆ, ಉತ್ತರ ಕರ್ನಾಟಕ ರೈತರ ಮನವಿಗೆ ಸರ್ಕಾರ ಎಳ್ಳು ನೀರು ಬಿಟ್ಟಿದೆ ಎಂಬ ಆರೋಪ ವ್ಯಕ್ತವಾಗಿದೆ.