ಬೆಳಗಾವಿ : ಕಳೆದ 26 ದಿನಗಳ ಅಂತರದಲ್ಲಿ ನಗರದ ಬೆಳಗಾವಿ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಬಿಮ್ಸ್ ) ಆಸ್ಪತ್ರೆಯ ವೈದ್ಯರು 100 ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ವಿಫಲವಾದ ಹಿನ್ನೆಲೆ ಬಿಮ್ಸ್ ನಿರ್ದೇಶಕರಾಗಿದ್ದ ಡಾ. ವಿನಯ್ ದಾಸ್ತಿಕೊಪ್ಪ ಅವರನ್ನು ಸರ್ಕಾರ ದೀರ್ಘಾವಧಿ ರಜೆ ಮೇಲೆ ಕಳುಹಿಸಿ, ಅವರ ಸ್ಥಳಕ್ಕೆ ಡಾ. ಉಮೇಶ ಕುಲಕರ್ಣಿ ಅವರನ್ನು ನೇಮಕ ಮಾಡಿದೆ. ಜೊತೆಗೆ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ಬಿಮ್ಸ್ ವಿಶೇಷ ಆಡಳಿತಾಧಿಕಾರಿಯಾಗಿ ನೇಮಿಸಿದೆ.
ಬಿಮ್ಸ್ ಆಡಳಿತ ಮೇಲುಸ್ತುವಾರಿ ವಹಿಸಿಕೊಂಡ ಬಳಿಕ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಆಡಳಿತಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಕೋವಿಡ್ ನಿರ್ವಹಣೆ ಸೇರಿದಂತೆ ಸಾಮಾನ್ಯ ರೋಗಿಗಳಿಗೆ ಉತ್ತಮ ಸೇವೆ ನೀಡಬೇಕೆಂಬ ಸದುದ್ದೇಶದಿಂದ ವೈದ್ಯರು, ಸಿಬ್ಬಂದಿ ಮಾಡಬೇಕಾಗಿರುವ ಕೆಲಸಗಳ ವೇಳಾಪಟ್ಟಿ ತಯಾರಿಸಿ ಅದರಂತೆ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.
ಹೀಗಾಗಿ ಬಿಮ್ಸ್ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇದರ ಪರಿಣಾಮ ಕೇವಲ 26 ದಿನಗಳ ಅಂತರದಲ್ಲಿ 100 ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಮೇ 26ರಂದು ಬಿಮ್ಸ್ನಲ್ಲಿ ಮೊದಲ ಬ್ಲ್ಯಾಕ್ ಫಂಗಸ್ ಪ್ರಕರಣ ವರದಿಯಾಗಿತ್ತು. ಇದಾದ ಬಳಿಕ ಮೂರು ದಿನಗಳ ಅಂತರದಲ್ಲಿ (ಮೇ 28)ರಂದು ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆರಂಭದಲ್ಲಿ ಸಿಬ್ಬಂದಿ ಕೊರತೆಯಿಂದ ದಿನಕ್ಕೆ ಕೇವಲ 2 ರಿಂದ 3 ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿತ್ತು.
ಬಿಮ್ಸ್ ಸೇರಿದಂತೆ ಜಿಲ್ಲೆಯ ವಿವಿಧ ವೈದ್ಯಕೀಯ ಸಂಸ್ಥೆಗಳಿಂದ ಇಎನ್ಟಿ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಅನಸ್ತೇಶಿಯಾ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ರೋಗಿಗಳ ಶುಶ್ರೂಶೆಗೆ ಬಳಸಿಕೊಳ್ಳಲಾಗ್ತಿದೆ.
ಇದರಿಂದ ಪ್ರತಿದಿನ ಶೇ. 6 ರಷ್ಟು ಶಸ್ತ್ರಚಿಕಿತ್ಸೆಯನ್ನು ಮಾಡಲು ಸಾಧ್ಯವಾಗುತ್ತಿದೆ. ಪ್ರಸ್ತುತ ಬಿಮ್ಸ್ ಆಸ್ಪತ್ರೆಯಲ್ಲಿ 95 ಬ್ಲ್ಯಾಕ್ ಫಂಗಸ್ ರೋಗಿಗಳು ದಾಖಲಾಗಿದ್ದಾರೆ ಎಂದು ನಿರ್ದೇಶಕ ಡಾ.ಉಮೇಶ ಕುಲಕರ್ಣಿ ತಿಳಿಸಿದ್ದಾರೆ.
ಓದಿ : ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ: ಸಿಎಂಗೆ ವರದಿ ಸಲ್ಲಿಸಿದ ತಜ್ಞರ ಸಮಿತಿ