ಬೆಳಗಾವಿ: ಮಳೆಯಿಂದ ಯಾವುದೇ ರೀತಿಯ ಬೆಳೆ ಅಥವಾ ಮನೆಹಾನಿಯಾಗಿದ್ದರೆ ಕೂಡಲೇ ಪರಿಹಾರ ನೀಡಬೇಕು. ಮನೆಹಾನಿ ಸಮೀಕ್ಷೆಯ ಕುರಿತ ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಕೂಡ ಆಯಾ ಗ್ರಾಮ ಪಂಚಾಯತಿಗಳಲ್ಲಿ ಪ್ರದರ್ಶಿಸಬೇಕು. ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಗಳಿದ್ದರೆ ಅವುಗಳನ್ನು ಪರಿಶೀಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಅತಿವೃಷ್ಟಿ/ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸದ್ಯಕ್ಕೆ ಯಾವುದೇ ಜಲಾಶಯಗಳು ಭರ್ತಿಯಾಗದಿರುವುದರಿಂದ ಸದ್ಯಕ್ಕೆ ನೀರು ಬಿಡುಗಡೆ ಮಾಡದಂತೆ ಜಲಾಶಯದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹ ಸಂದರ್ಭದಲ್ಲಿ ಉಂಟಾಗಿರುವ ಹಾನಿಯ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಮಳೆಮಾಪನ ಕೇಂದ್ರ ಸ್ಥಾಪನೆ: ಕಲ್ಲೋಳ ಬ್ಯಾರೇಜಿನಲ್ಲಿ ಮಳೆಮಾಪನ ಕೇಂದ್ರ ಸ್ಥಾಪನೆಗೆ ಪ್ರಸ್ತಾವವನ್ನು ಕಳಿಸುವಂತೆ ತಿಳಿಸಿದ ಸಚಿವರು, ಪ್ರಸ್ತಾವ ಬಂದ ಕೂಡಲೇ ಮಂಜೂರು ಮಾಡಲಾಗುವುದು. ಬಳ್ಳಾರಿ ನಾಲಾದಿಂದ ಪ್ರತಿವರ್ಷ ಸಮಸ್ಯೆಗಳು ಎದುರಾಗುವುದರಿಂದ ಸಮಗ್ರವಾಗಿ ಸಮೀಕ್ಷೆ ಕೈಗೊಂಡು ವಿಸ್ತ್ರತ ವರದಿಯನ್ನು ಕಳುಹಿಸಿಕೊಡಬೇಕು. ಬೃಹತ್ ಮತ್ತು ಮಧ್ಯಮ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಕೈಗೊಂಡು ವರದಿ ಸಿದ್ಧಪಡಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಪುನರ್ವಸತಿಗೆ ಸೂಚನೆ: ಅಥಣಿ ತಾಲ್ಲೂಕಿನ ನಾಲ್ಕು ಪುನರ್ವಸತಿ ಕೇಂದ್ರಗಳು ಅನೇಕ ವರ್ಷಗಳಿಂದ ಖಾಲಿ ಉಳಿದಿದ್ದವು. ಆದರೆ ಇದೀಗ ಜನರು ಸ್ವಯಂಪ್ರೇರಣೆಯಿಂದ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಲು ಮುಂದಾಗಿದ್ದರೆ ಅಲ್ಲಿರುವ ನಾಲ್ಕು ಸಾವಿರ ನಿವೇಶನಗಳನ್ನು ನಿಖರವಾಗಿ ಗುರುತಿಸಿಕೊಡಬೇಕು. ಇದಲ್ಲದೇ ಜಲಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬಹುದು.ಜಿಲ್ಲಾಡಳಿತದಿಂದ ಉತ್ತಮ ಕೆಲಸಗಳಾಗುತ್ತಿದ್ದು, ಇದೇ ರೀತಿ ಮುಂದುವರಿಸಬೇಕು. ಸರ್ಕಾರದ ಮಟ್ಟದಲ್ಲಿ ಏನಾದರೂ ನೆರವಿನ ಅಗತ್ಯವಿದ್ದರೆ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.
ಪ್ರವಾಹ ಭೀತಿ ಸದ್ಯಕ್ಕಿಲ್ಲ: ಜುಲೈನಲ್ಲಿ ಶೇ.41ರಷ್ಟು ಹೆಚ್ಚಿನ ಮಳೆಯಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ಇದುವರೆಗೆ ವಾಡಿಕೆಗಿಂತ ಶೇ. 22ರಷ್ಟು ಅಧಿಕ ಮಳೆಯಾಗಿದೆ. ರಾಜಾಪುರ ಬ್ಯಾರೇಜ್ನಲ್ಲಿ 23 ಕ್ಯೂಸೆಕ್ ನೀರು ಹರಿವು ಇರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಯಾವುದೇ ಜಲಾಶಯಗಳು ಭರ್ತಿ ಆಗಿಲ್ಲದಿರುವುದರಿಂದ ಸದ್ಯಕ್ಕೆ ಪ್ರವಾಹ ಭೀತಿಯಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಆಲದ ಮರ: ತಂದೆ-ಮಗ ದಾರುಣ ಸಾವು