ಅಥಣಿ: ಶಿಕ್ಷಕನನ್ನು ವಜಾ ಮಾಡಿದ್ದಕ್ಕೆ ಶಾಲೆ ಆಡಳಿತ ಮಂಡಳಿಯ ವಿರುದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ಕುಳಿತು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸರ್ಕಾರಿ ಅನುದಾನಿತ ಪ್ರೌಢಶಾಲೆಯ ಬಂಬಲವಾಡ ಗ್ರಾಮದಲ್ಲಿ ಮಕ್ಕಳು ಪ್ರತಿಭಟನೆ ನಡೆಸಿ ಶಾಲೆ ಆಡಳಿತ ಮಂಡಳಿಯ ವಿರುದ್ಧ ಅಸಮಾಧಾನ ಹೊರಹಾಕಿದರು.
ಶಿಕ್ಷಕ ಗಿರಿಮಲ್ಲ ಯಾದವಾಡ ಮೂರು ದಿನ ರಜೆ ಇದ್ದ ಕಾರಣಕ್ಕೆ ಏಕಾಏಕಿ ಶಾಲೆ ಆಡಳಿತ ಮಂಡಳಿಯಿಂದ ವಜಾ ಮಾಡಿ ಆದೇಶ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಶಾಲೆಯ ಮುಖ್ಯ ಗೇಟಿನಲ್ಲಿ ಕುಳಿತು ಪ್ರತಿಭಟನೆ ನಡೆಸಿ, ನಮಗೆ ನಮ್ಮ ಶಿಕ್ಷಕರು ಬೇಕು ಎಂದು ಪಟ್ಟು ಹಿಡಿದರು. ಇದೇ ಸಂದರ್ಭದಲ್ಲಿ ವಜಾಗೊಂಡ ಶಿಕ್ಷಕ ಗಿರಿಮಲ್ಲ ಅವರಿಗೆ ಯಾರೂ ಕಿಡಿಗೇಡಿಗಳು ಹಲ್ಲೆ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಖಂಡಿಸಿ ಪ್ರತಿಭಟನೆ ತೀವ್ರ ಸ್ವರೂಪ ತಿರುಗುತ್ತಿದ್ದಂತೆ ಚಿಕ್ಕೋಡಿ ಪೊಲೀಸರು ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಜಾಗೊಂಡ ಶಿಕ್ಷಕ ಗಿರಿಮಲ್ಲ ಯಾದವಾಡ ಮಾತನಾಡಿ, ಕಳೆದ 1998 ರಿಂದ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. 2012 ರಲ್ಲಿ ಸರ್ಕಾರ ಅನುದಾನಿತ ಪ್ರೌಢಶಾಲೆ ಎಂದು ಆದೇಶ ಮಾಡಲಾಗಿತ್ತು. ಆದರೆ ಶಾಲೆ ಆಡಳಿತ ಮಂಡಳಿಯವರು ನನಗೆ ದುಡ್ಡು ಕೊಡಿ ಎಂದು ಮಾನಸಿಕವಾಗಿ ಕಿರುಕುಳ ನೀಡುತ್ತಾರೆ.
ಕಳೆದ ಹತ್ತು ವರ್ಷಗಳಿಂದ ನಿತ್ಯ ನೋಟಿಸ್ ನೀಡುತ್ತಾರೆ. ಕಳೆದ ಮೂರು ದಿನದಿಂದ ನಾನು ರಜೆಯಲ್ಲಿ ಇದ್ದ ಕಾರಣ ನನ್ನನ್ನು ವಜಾ ಮಾಡಿದ್ದಾರೆ. ಇಲ್ಲಿ ಪ್ರೌಢ ಶಾಲೆಯ ಮಂಡಳಿ ಸರ್ವಾಧಿಕಾರ ಆಡಳಿತ ಇರುವುದರಿಂದ ನಮಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು.
ಓದಿ: ಐದು ತಿಂಗಳಿನಿಂದ ಕರ್ತವ್ಯಕ್ಕೆ ಗೈರು ಹಾಜರಾದ ಶಿಕ್ಷಕ.. ಪಾಠ ಮಾಡದೇ ವೇತನ ಪಡೆಯೋ ಮಾಸ್ತರ್!