ಬೆಳಗಾವಿ: ಬೀದಿನಾಯಿಗಳು ಪುರಸಭೆ ಸದಸ್ಯೆ ಮೇಲೆ ದಾಳಿ ಮಾಡಿದ ಘಟನೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಪುರಸಭೆ ವಾರ್ಡ್ ನಂ16 ರ ಸದಸ್ಯೆ ಡಲಾಯತ್ ಅವರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ದಾಳಿಯಿಂದ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೀದಿನಾಯಿಗಳ ಗುಂಪು ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗುತ್ತಿವೆ. ಇದರಿಂದ ಚಿಕ್ಕ ಮಕ್ಕಳು, ವಯೋವೃದ್ಧರು ರಸ್ತೆ ಮೇಲೆ ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಕ್ರಮಕೈಗೊಳ್ಳಲು ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಾಳಿಗೊಳಗಾಗಿರುವ ಪುರಸಭೆ ಸದಸ್ಯೆ ಆರೋಪಿಸಿದ್ದಾರೆ.
ಪುರಸಭೆ ಸದಸ್ಯೆಯೇ ಬೀದಿನಾಯಿ ದಾಳಿಗೆ ಒಳಗಾಗಿದ್ದು, ಇನ್ನು ಜನಸಾಮಾನ್ಯರ ಸ್ಥಿತಿ ಹೇಗೆ ಎಂದು ಪುರಸಭೆ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.