ಬೆಳಗಾವಿ: ಮುಸುಕುಧಾರಿ ಯುವಕರ ಗುಂಪೊಂದು ಗ್ರಾಮಕ್ಕೆ ನುಗ್ಗಿ ನಾಲ್ಕು ಮನೆಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಿ, ಮನೆಯಲ್ಲಿದ್ದ ವಸ್ತುಗಳನ್ನು ಪುಡಿಗಟ್ಟಿ ಅಟ್ಟಹಾಸ ಮೆರೆದಿರುವ ಘಟನೆ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
15ಕ್ಕೂ ಹೆಚ್ಚು ಪುಂಡರು ಕೃತ್ಯ ಎಸಗಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್‌ಗಳನ್ನು ಜಖಂ ಮಾಡಿದ್ದಾರೆ. ಮನೆ ಕಿಟಕಿ ಗಾಜು, ಟೈಲ್ಸ್‌ಗೆ ಹಾನಿಯಾಗಿದೆ. ಯುವಕರು ಪ್ರೀತಿ ವಿಚಾರದಲ್ಲಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ದಾಳಿಗೊಳಗಾದವರ ಪೈಕಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನ ಮನೆಯೂ ಸೇರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರೇಮ ಪ್ರಕರಣ ಈ ಘಟನೆಗೆ ಕಾರಣವಾಯಿತೇ ಎಂಬ ಅನುಮಾನ ಗ್ರಾಮದಲ್ಲಿ ಕೇಳಿಬರುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕುವ ಬಗ್ಗೆ ಜಗಳವಾಡಿದ್ದಾರೆ. ಬಳಿಕ ಹಿರಿಯರು ರಾಜಿ ಸಂಧಾನ ಮಾಡಿದ್ದರು. ಈ ಬೆನ್ನಲ್ಲೇ ಕಿಡಿಗೇಡಿಗಳು ರಾತ್ರಿ ದಾಳಿ ಮಾಡಿದ್ದಾರೆ.
ಗಲಾಟೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಸೇರಿದಂತೆ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸದ್ಯ ಸ್ಥಳದಲ್ಲಿ ಕೆಎಸ್ಆರ್ಪಿ ತುಕುಡಿ ನಿಯೋಜಿಸಲಾಗಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ. ಕಿಡಿಗೇಡಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ: ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾವಗೆ ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಘಟನೆಗೆ ಕಾರಣ ಹಾಗೂ ನಂತರ ತೆಗೆದುಕೊಂಡಿರುವ ಕ್ರಮಗಳ ಕುರಿತು ಪೊಲೀಸರಿಂದ ಮಾಹಿತಿ ಪಡೆದರು.
ನಂತರ ಮಾತನಾಡಿದ ಹೆಬ್ಬಾಳ್ಕರ್, "ಶಾಲೆ, ಕಾಲೇಜಿಗೆ ತೆರಳುವ ಅಪ್ರಾಪ್ತ ಮಕ್ಕಳು ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟಿದ್ದರಿಂದ ಘಟನೆ ನಡೆದಿದೆ. ಎರಡೂ ಗ್ರಾಮಗಳ ಹಿರಿಯರನ್ನು ಕರೆಸಿ ಮಾತುಕತೆ ನಡೆಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು" ಎಂದರು.
ಇದನ್ನೂ ಓದಿ: ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್