ಬೆಂಗಳೂರು: ನಾಳೆಯಿಂದ 10ನೇ ಹಾಗೂ ಪಿಯು ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಯಾವ ರೀತಿಯ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪರಿಶೀಲಿಸಿದರು.
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದಂತೆ ಶಿಕ್ಷಣ ಇಲಾಖೆ ರೂಪಿಸಿದ ಎಸ್ಒಪಿ ಆಧರಿಸಿ ಶಾಲಾ-ಕಾಲೇಜುಗಳು ಆರಂಭವಾಗುತ್ತಿವೆ. ಈ ಸಂಬಂಧ ಬಸವನಗುಡಿಯ ಬಿ.ಎಂ.ಎಸ್ ಕಾಲೇಜು, ಜಯನಗರದ ನ್ಯಾಷನಲ್ ಕಾಲೇಜು, ವಿಜಯ ಕಾಲೇಜು, ಎನ್ಎಂಆರ್ಕೆವಿ ಕಾಲೇಜು ಹಾಗೂ ಆರ್ವಿ ಕಾಲೇಜುಗಳಿಗೆ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಿದರು. ಬಳಿಕ ಆಯಾ ಶಾಲಾ- ಕಾಲೇಜುಗಳ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರ ಜೊತೆ ಸಮಾಲೋಚನೆ ನಡೆಸಿದರು.
ಕೋವಿಡ್ ನಿಯಮ ಪಾಲನೆ ಕಡ್ಡಾಯ
ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಕೈ ತೊಳೆಯಲು ಸ್ಯಾನಿಟೈಸರ್ ಬಳಕೆ, ಶಿಕ್ಷಕರು ಕೋವಿಡ್ ಪರೀಕ್ಷೆ ಫಲಿತಾಂಶದೊಂದಿಗೆ ಬರುವುದು, ಮಕ್ಕಳ ಶಾರೀರಿಕ ಅಂತರವನ್ನು ಉಳಿಸಿಕೊಳ್ಳುವಲ್ಲಿ ಗಮನ ಹರಿಸುವುದು, ಮಕ್ಕಳ ಆರೋಗ್ಯ, ರೋಗಲಕ್ಷಣಗಳ ಕುರಿತು ಆಗಾಗ್ಗೆ ಗಮನ ಹರಿಸುವುದು, ತರಗತಿ ಕೊಠಡಿಯಲ್ಲಿ ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕೆಂದು ಶಿಕ್ಷಕರಿಗೆ ಸಚಿವರು ಸೂಚಿಸಿದರು.
ಓದಿ: ಡೀಸೆಲ್ ಬದಲು ನೀರು: ಬಂಕ್ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಾಳೆ ಶಾಲೆ-ಕಾಲೇಜುಗಳು ಆರಂಭಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಶಾಲೆಗಳಿಗೆ ರೌಂಡ್ಸ್ ಹೊಡೆಯುತ್ತಿದ್ದೇನೆ. ನಿನ್ನೆ ಯಲಹಂಕ, ಇವತ್ತು ಜಯನಗರ, ಬಸವನಗುಡಿ ಕಡೆ, ನಾಳೆ ಆನೇಕಲ್ ಕಡೆ ಭೇಟಿ ಕೊಡಲಿದ್ದೇನೆ. ಶಾಲೆಗಳಲ್ಲಿ ಸಿದ್ಧತೆ ಹೇಗಿದೆ, ಸಿಲಬಸ್ ಹೇಗಿದೆ ಎನ್ನುವುದರ ಕುರಿತು ಚರ್ಚೆ ಮಾಡಲಾಗುತ್ತಿದೆ ಎಂದರು.
ಶಾಲೆ ಆರಂಭ ಕುರಿತಂತೆ ಎಲ್ಲಾ ಕಡೆಯಿಂದಲೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ. ವಿದ್ಯಾರ್ಥಿಗಳಲ್ಲಿ ಶಾಲೆ ಆರಂಭ ಬಗ್ಗೆ ಸಂತೋಷ ಇದೆ. ಕೆಲವು ಕಾಲೇಜುಗಳಲ್ಲಿ ಬ್ಯಾಂಡ್ ಹಾಗೂ ತೋರಣ ಕಟ್ಟಿ ಆರಂಭಿಸುತ್ತಿದ್ದಾರೆ. ಇದೆಲ್ಲಾ ಸಂಸ್ಥೆಗಳು ಯಾವ ರೀತಿ ಸಜ್ಜಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂದರು.
ನಾಳೆ ಮೊದಲ ಪೀರಿಡ್ನಲ್ಲಿ ಪಾಠ ಮಾಡಬೇಡಿ ಎಂದು ಶಿಕ್ಷಕರಿಗೆ ಹೇಳಿದ್ದೇನೆ. ಮಕ್ಕಳ ಭಾವನೆ ಬಗ್ಗೆ ಕೇಳಿ ಅವರ ಅನುಭವ ಹೇಗಿದೆ ಎಂಬುದನ್ನೂ ಕೇಳುವಂತೆ ತಿಳಿಸಿರುವುದಾಗಿ ಹೇಳಿದರು.
ಮಕ್ಕಳನ್ನು ಶಾಲೆಗೆ ಕಳುಹಿಸಲೇಬೇಕು ಎನ್ನುವ ಒತ್ತಾಯ ಇಲ್ಲ. ಬ್ರಿಟನ್ ಕೊರೊನಾ ಆರಂಭಗೊಳುತ್ತಿದೆ. ಆದರೆ ಕೊರೊನಾದಂತೆ ಈ ರೂಪಾಂತರಿ ವೈರಸ್ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಯಾವ ಪೋಷಕರಿಗೂ, ಯಾರಿಗೂ ಭಯ ಬೇಡ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ಭರವಸೆ ನೀಡಿದರು.