ಬೆಳಗಾವಿ: ಇಂದು ಸ್ಪರ್ಧಾತ್ಮಕ ಯುಗ. ಎಲ್ಲ ಹೆತ್ತವರದ್ದು ತಮ್ಮ ಮಕ್ಕಳನ್ನು ಸಾಧನೆ ಮಾಡಬೇಕು ಎಂಬ ಹಂಬಲ. ಆದರೆ, ಆರ್ಥಿಕವಾಗಿ ಸದೃಢವಾಗಿರುವವರು ತಮ್ಮ ಮಕ್ಕಳನ್ನು ಕೋಚಿಂಗ್ ಸೆಂಟರ್, ಟ್ಯೂಶನ್ಗೆ ಕಳುಹಿಸುತ್ತಾರೆ. ಇದು ಸಾಧ್ಯವಾಗದೇ ಬಡವರು ಪರದಾಡುತ್ತಾರೆ. ಅಂತಹವರ ಮಕ್ಕಳಿಗೂ ಅನುಕೂಲವಾಗಲಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅವರೂ ಸಾಧನೆ ಮೆರೆಯಲಿ ಎನ್ನುವ ಕಾಳಜಿಯಿಂದ ಬೆಳಗಾವಿಯ ಸರ್ಕಾರಿ ಸರ್ದಾರ್ಸ್ ಪ್ರೌಢ ಶಾಲೆಯಲ್ಲಿ ನಿತ್ಯ ಬೆಳಗ್ಗೆ ವಿಶೇಷ ತರಗತಿ ಸಂಘಟಿಸಿ, ಮಕ್ಕಳಲ್ಲಿ ಪ್ರೇರಣೆ ತುಂಬಲಾಗುತ್ತಿದೆ. ಇನ್ನು ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಶಿಕ್ಷಕರ ಪಾಠ ಕೇಳುತ್ತಿದ್ದಾರೆ.
ಇದು ಈ ಒಂದೇ ಶಾಲೆಯ ಕತೆಯಲ್ಲ. ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಂಡುಬರುತ್ತಿರುವ ಚಿತ್ರಣವಿದು. ಹೌದು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಲಾಗುತ್ತಿದೆ. ಸರ್ಕಾರಿ ಸರ್ದಾರ್ಸ್ ಪ್ರೌಢ ಶಾಲೆಯಲ್ಲಿ ಆಗಸ್ಟ್ 1 ರಿಂದ ಪ್ರತಿದಿನ ಬೆಳಗ್ಗೆ 9 ರಿಂದ 10 ರವರೆಗೆ ಒಂದೊಂದು ವಿಷಯ ಕುರಿತು ವಿಶೇಷ ತರಗತಿ ನಡೆಸಲಾಗುತ್ತಿದೆ. ಶಾಲೆಯ ಆವರಣದಲ್ಲಿ ಗಿಡಮರಗಳ ಕೆಳಗೆ ಕುಳಿತುಕೊಂಡು ಶಿಕ್ಷಕರು ಮಾಡುವ ಪಾಠವನ್ನು ಮಕ್ಕಳು ಶ್ರದ್ಧೆಯಿಂದ ಆಲಿಸುತ್ತಿದ್ದಾರೆ.
![Special Class to the students](https://etvbharatimages.akamaized.net/etvbharat/prod-images/06-09-2023/19442870_kmeg.jpg)
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ವಿದ್ಯಾರ್ಥಿನಿ ಅನನ್ಯ ಕೊಡ್ಲಿ, ವಿಶೇಷ ತರಗತಿಗಳಿಂದ ನಮಗೆ ತುಂಬಾ ಪ್ರಯೋಜನ ಆಗುತ್ತಿದೆ. ತರಗತಿ ಅವಧಿಗಿಂತ ಭಿನ್ನವಾದ ಕಲಿಕೆ ಇದು. ಹಲವು ಚಟುವಟಿಕೆಗಳನ್ನು ಈ ಒಂದು ಗಂಟೆಯಲ್ಲಿ ಕೈಗೊಳ್ಳಬಹುದಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸಿ, ರಾಜ್ಯಕ್ಕೆ ಟಾಪರ್ ಆಗಬೇಕು ಎಂಬ ಗುರಿ ಇಟ್ಟುಕೊಂಡು ಅಧ್ಯಯನ ಮಾಡುತ್ತಿದ್ದೇನೆ ಎಂದರು.
ಇನ್ನೊಬ್ಬ ವಿದ್ಯಾರ್ಥಿನಿ ರಾಧಿಕಾ ಚೌಗುಲೆ ಮಾತನಾಡಿ, ನಿತ್ಯ ಒಂದೊಂದು ವಿಷಯವನ್ನು ಶಿಕ್ಷಕರು ನಮಗೆ ಕಲಿಸುತ್ತಿದ್ದಾರೆ. ಶಿಕ್ಷಕರ ಪ್ರೋತ್ಸಾಹದಿಂದಾಗಿ ನಾನು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಪಾಸಾಗಿದ್ದು, ಪ್ರತಿ ತಿಂಗಳು ಒಂದು ಸಾವಿರ ರೂ. ವಿದ್ಯಾರ್ಥಿ ವೇತನ ಬರುತ್ತಿದೆ. ಈ ಹಣವನ್ನು ನನ್ನ ಭವಿಷ್ಯದ ಶಿಕ್ಷಣಕ್ಕೆ ಬಳಸಿಕೊಳ್ಳುತ್ತೇನೆ. ಮುಂದೆ ವೈದ್ಯೆಯಾಗಿ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಿದ್ದೇನೆ ಎಂದರು.
![Special Class to the students](https://etvbharatimages.akamaized.net/etvbharat/prod-images/06-09-2023/19442870_gmeg.jpg)
ಹಿಂದಿ ಶಿಕ್ಷಕಿ ಸುಶೀಲಾ ಗಜೇಂದ್ರಗಡ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ 173 ವರ್ಷಗಳ ಇತಿಹಾಸ ಹೊಂದಿರುವ ಶಾಲೆ ಇದಾಗಿದ್ದು, ಬಡ ಮಕ್ಕಳೇ ಹೆಚ್ಚಿದ್ದಾರೆ. ಹಾಗಾಗಿ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದೇವೆ. ಸಾಯಂಕಾಲವೂ 4.30- 5.30 ರವರೆಗೆ ಗುಂಪು ಅಧ್ಯಯನ ಆರಂಭಿಸುವ ಚಿಂತನೆ ನಡೆಸಿದ್ದೇವೆ. ಮೂರು ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 50- 60ರಷ್ಟು ಫಲಿತಾಂಶ ದಾಖಲಾಗಿತ್ತು. ಬಳಿಕ ವಿಶೇಷ ತರಗತಿ ಆರಂಭಿಸಿದ್ದರಿಂದ ಹಿಂದಿನ ವರ್ಷ ಶೇ 70 ಫಲಿತಾಂಶ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಇನ್ನು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಡಿಡಿಪಿಐ ಬಸವರಾಜ ನಾಲತವಾಡ ಮಾತನಾಡಿ, ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿ ಸುಮಾರು 37 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ವಿಶೇಷ ತರಗತಿ, ಮನೆ ಮನೆ ಭೇಟಿ, ವಿಷಯಾಧಾರಿತ ಕಾರ್ಯಾಗಾರ ಸೇರಿ ಮತ್ತಿತರ ಚಟುವಟಿಕೆ ನಡೆಸುತ್ತಿದ್ದೇವೆ. ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ಅಧಿಕಾರಿಗಳಿಗೆ ದತ್ತು ನೀಡಿದ್ದು, ಬೇರೆ ಬೇರೆ ಇಲಾಖೆ ಅಧಿಕಾರಿಗಳಿಗೂ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಂತೆ ತಿಳಿಸಿದ್ದೇವೆ ಎಂದರು.
ಒಟ್ಟಿನಲ್ಲಿ ಬಡವರ ಮಕ್ಕಳು ಬೆಳೆದು, ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಶ್ರಮಿಸುತ್ತಿರುವ ಶಿಕ್ಷಕರ ಕಾರ್ಯ ನಿಜಕ್ಕೂ ಶ್ಲಾಘನೀಯವೇ ಸರಿ.
ಇದನ್ನೂ ಓದಿ : ಎಸ್ಎಸ್ಎಲ್ಸಿ- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ 3 ಬಾರಿ ಪರೀಕ್ಷೆಗೆ ಅವಕಾಶ: ಸಚಿವ ಮಧು ಬಂಗಾರಪ್ಪ