ಬೆಳಗಾವಿ: ಕರ್ತವ್ಯನಿರತ ಪೇದೆಯ ಮೇಲೆ ಹಲ್ಲೆ ಮಾಡಿದ ಆರೋಪದಡಿ ಸಿಆರ್‌ಪಿಎಫ್ ಯೋಧನನ್ನು ಬೆಳಗಾವಿ ಜಿಲ್ಲೆಯ ಸದಲಗಾ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಸಿಆರ್‌ಪಿಎಫ್ ಯೋಧನಿಂದ ಹಲ್ಲೆ ಆರೋಪ- ವಿಡಿಯೋ
ಈ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಎಸ್ಪಿ ಲಕ್ಷ್ಮಣ್ ನಿಂಬರಗಿ, ಏ. 23ರಂದು ಇಬ್ಬರು ಪೇದೆಗಳು ಯಕ್ಸಂಬಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸಿಆರ್‌ಪಿಎಫ್ ಯೋಧ ತನ್ನ ಐದಾರು ಸ್ನೇಹಿತರ ಜತೆ ನಿಂತಿದ್ದ. ಪೊಲೀಸರನ್ನು ಕಂಡ ತಕ್ಷಣ ಸ್ನೇಹಿತರು ಓಡಿ ಹೋದರೂ ಯೋಧ ಮಾತ್ರ ಅಲ್ಲೇ ಇದ್ದರು. ಈ ವೇಳೆ ಮಾಸ್ಕ್ ಏಕೆ ಧರಿಸಿಲ್ಲ ಎಂದು ಯೋಧನನ್ನು ಪ್ರಶ್ನಿಸಿದಾಗ ಆತ ಪೊಲೀಸರ ಜತೆಗೆ ವಾಗ್ವಾದ ಮಾಡಿದ್ದಾನೆ.
ಸಾಲದೆಂಬಂತೆ ಕಾಲರ್ ಹಿಡಿದು ಪೇದೆಯ ಹೊಟ್ಟೆಗೆ ಒದ್ದಿದ್ದಾನೆ. ಆಗ ಕರ್ತವ್ಯದಲ್ಲಿದ್ದ ಮತ್ತೋರ್ವ ಪೇದೆ ಲಾಠಿ ಬೀಸಿ ಯೋಧನನ್ನು ಆತನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ದಿನವೇ ಯೋಧನನ್ನು ಸದಲಗಾ ಠಾಣೆಗೆ ಕರೆದೊಯ್ಯಲಾಗಿತ್ತು.
ಅವತ್ತೇ ಸಿಆರ್‌ಪಿಎಫ್ ಮೇಲಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಬಂಧಿಸಿದ ದಿನವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆದರೆ, ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅರ್ಧ ವಿಡಿಯೋ ಮಾತ್ರ ಹರಿದಾಡುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ ಎಸ್ಪಿ ಲಕ್ಷಣ ನಿಂಬರಗಿ, ಘಟನೆಯ ಸಂಪೂರ್ಣ ವಿಡಿಯೋ, ಪೊಲೀಸನ ಹೊಟ್ಟೆಗೆ ಒದ್ದಿದ ಗುರುತು ಇರುವ ಫೋಟೋ ಮಾಧ್ಯಮಗಳಿಗೆ ನೀಡಿದ್ದಾರೆ.