ಬೆಳಗಾವಿ: ವಯಸ್ಸಾದ ತಾಯಿಯನ್ನು ಮಗನೋರ್ವ ರಸ್ತೆಯಲ್ಲಿಯೇ ಬಿಟ್ಟು, ಅಲ್ಲಿದ್ದ ಕಾಲ್ಕಿತ್ತಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಬಂದಿರುವ ವ್ಯಕ್ತಿ ಇಲ್ಲಿನ ಚೆನ್ನಮ್ಮ ವೃತ್ತದ ಬಳಿಯಿರುವ ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ವೃದ್ಧ ತಾಯಿಗೆ ಇಬ್ಬರು ಮಕ್ಕಳಿದ್ದು, ಅವರಿಬ್ಬರೂ ಸರ್ಕಾರಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಸ್ಥಳೀಯ ನಿವಾಸಿಯೊಬ್ಬರು ವೃದ್ಧೆಯನ್ನ ಮಾತನಾಡಿಸಿದ್ದು, ತದನಂತರ ಜಿಲ್ಲಾಸ್ಪತ್ರೆಯ ಆವರಣದೊಳಗೆ ತಂದು ಮಲಗಿಸಿದ್ದಾರೆ ಎನ್ನಲಾಗಿದೆ.
9 ತಿಂಗಳ ಕಾಲ ಹೆತ್ತು, ಹೊತ್ತು ಸಲುಹಿದ ತಾಯಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ, ಆಕೆಯನ್ನ ಮನೆಯಿಂದ ಹೊರಹಾಕಿ ಈ ರೀತಿ ನಡೆದುಕೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೀಮ್ಸ್ ಆಸ್ಪತ್ರೆಯಲ್ಲೂ ವೃದ್ಧೆಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಕಾರಣ ಕೊರೊನಾ ವೈರಸ್ ಹೆಚ್ಚಳದಿಂದಾಗಿ ಜಿಲ್ಲಾಸ್ಪತ್ರೆಯನ್ನು ಈಗಾಗಲೇ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿದ್ದಾರೆ. ಹೀಗಾಗಿ ವೈದ್ಯರು ವೃದ್ಧೆಯನ್ನು ಆಸ್ಪತ್ರೆ ಒಳಗಡೆ ಕರೆದುಕೊಳ್ಳದ ಹಿನ್ನೆಲೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಲಗಿಕೊಂಡಿರುವ ದೃಶ್ಯ ಕಂಡು ಬಂತು. ಜತೆಗೆ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಆಗುತ್ತಿರುವುದರಿಂದ ಶೀತದ ಗಾಳಿ ಹೆಚ್ಚಾಗಿ ಬೀಸುತ್ತಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ವೃದ್ಧ ತಾಯಿಗೆ ಇರಲು ಆಶ್ರಯದ ಜೊತೆಗೆ ಸೂಕ್ತ ಚಿಕಿತ್ಸೆ ನೀಡಬೇಕಿದೆ.