ಬೆಳಗಾವಿ: ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು ಯಾವುದೇ ತೊಂದರೆ ಇಲ್ಲ. ಬಿಜೆಪಿಯ ಹಲವು ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದು ನಮ್ಮ ಸರ್ಕಾರ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಸಚಿವ ಸತೀಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ರೋಷನ್ ಬೇಗ್ ಪ್ರಧಾನಿಯವರಿಗೆ ಶುಭಾಶಯ ಹೇಳಿದ್ದು ತಪ್ಪಿಲ್ಲ, ಅದು ಅವರ ವಯಕ್ತಿಕ. ನಮ್ಮ ಸರ್ಕಾರದಲ್ಲಿ ಯಾವುದೇ ಅಸಮಾಧಾನವಿಲ್ಲ. ನಾಲ್ಕು ವರ್ಷ ಸುಭದ್ರ ಅಧಿಕಾರ ಮಾಡಲಿದೆ ಎಂದರು.
ರೆಸಾರ್ಟ್ ರಾಜಕೀಯ ಮಾಡುವವರ ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಕೆಲವು ಸಚಿವರ ರಾಜಿನಾಮೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸರ್ಕಾರ ಉಳಿಸಲು ಪಕ್ಷ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.