ಚಿಕ್ಕೋಡಿ: ಕಳೆದ ವರ್ಷ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ರೈತರು, ತಾವು ಬೆಳೆದ ಬೆಳೆಗಳನ್ನು ಹಾಳು ಮಾಡಿಕೊಂಡಿದ್ದು ಅದರಿಂದ ಇನ್ನು ಚೇತರಿಸಿಕೊಂಡಿಲ್ಲ. ಅಷ್ಟರಲ್ಲಾಗಲೇ ಈಗ ಕೊರೊನಾದಿಂದ ಬೆಳೆದ ಬೆಳೆ ಮಾರಾಟವಾಗದೇ ತರಕಾರಿ ಬೆಳೆಗಳು ಹಾಳಾಗಿವೆ. ನಮ್ಮಗೆ ಆದಷ್ಟು ಬೇಗ ಪರಿಹಾರ ಒದಗಿಸಿ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಷ ಸಂಪಗಾಂವ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ರೈತರು ಮನವಿ ಸಲ್ಲಿಸಿದರು.
ಈ ಕೋವಿಡ್ -19 ನಿಂದ ದೇಶವೇ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ರೈತ ಬೆಳೆದ ಬೆಳೆಗಳೆಲ್ಲವೂ ಮಾರುಕಟ್ಟೆಗೆ ಹೋಗುತ್ತಿಲ್ಲ ಕಾರಣ ಯಾವ ಮಾರುಕಟ್ಟೆಗಳು ಪ್ರಾರಂಭವಿಲ್ಲ. ಇದರಿಂದ ರೈತ ತಾನು ಬೆಳೆದ ಬೆಳೆಗಳೆಲ್ಲವೂ ಸಾಗಾಣಿಕೆ ಮಾಡಬೇಕಾದರೆ ಮೂಲ ಸೌಕರ್ಯಗಳಿಲ್ಲ ಇದರಿಂದ ಬೆಳೆಗಳೆಲ್ಲವೂ ಗದ್ದೆಯಲ್ಲಿ ಕೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಲು ಮುಂದಾಗಬೇಕು. ಕೃಷಿ ಮಂತ್ರಿ ಅವರು ಬೆಳೆಗಳು ಹೋಲದಲ್ಲಿ ಇದ್ದರೆ ಮಾತ್ರ ಪರಿಹಾರ ನೀಡುತ್ತೇವೆ ಎನ್ನುವ ಮಾತನ್ನು ಹಿಂದಕ್ಕೆ ಪಡೆದುಕೊಳ್ಳಬೇಕು.
ಯಾಕೆಂದರೆ ರೈತ ಬೆಳೆದ ಬೆಳೆಯನ್ನು ಕೃಷಿಗೆ ಸಂಬಂಧಿಸಿದ ಅಧಿಕಾರಿಗಳು ಬಂದು ನೋಡುವವರೆಗೆ ಆ ಬೆಳೆ ಸಂಪೂರ್ಣವಾಗಿ ಹಾಳಾಗಿರುತ್ತದೆ. ಹಾಗೂ ರೈತ ಮುಂದಿನ ಬೆಳೆ ಬಿತ್ತನೆ ಮಾಡಲು ಜಮೀನು ತಯಾರಿ ಮಾಡಬೇಕಾದರೆ ಮೊದಲ ಇರುವ ಬೆಳೆಯನ್ನು ತೆಗೆಯುವುದು ಅನಿವಾರ್ಯವಾಗಿದೆ. ಅದಕ್ಕಾಗಿ ತಕ್ಷಣ ಸರ್ಕಾರ ರೈತರ ನೋವಿಗೆ ಸ್ಪಂದಿಸಬೇಕು ಹಾಗೂ ಶೀಘ್ರವಾಗಿ ರೈತರಿಗೆ ಪರಿಹಾರ ನೀಡಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರ ವತಿಯಿಂದ ರೈತ ಹೋರಾಟಗಾರ ಮಂಜುನಾಥ ಪರಗೊಂಡ ಆಗ್ರಹಿಸಿದ್ದಾರೆ.