ಬೆಳಗಾವಿ: ದೇಶ ಕಾಯುವ ಯೋಧನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಸವದತ್ತಿ ತಾಲೂಕಿನ ತೋಟಗಟ್ಟಿ ಗ್ರಾಮದಲ್ಲಿ ನಡೆದಿದೆ.
ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಠ್ಠಲ ಕಡಕೋಳ ಕುಟುಂಬಕ್ಕೆ ಗ್ರಾಮಸ್ಥರು ಕಳೆದ ಮೂರು ವರ್ಷಗಳಿಂದ ಬಹಿಷ್ಕಾರ ಹಾಕಿದ್ದಾರೆ. ಯೋಧನ ಕುಟುಂಬಕ್ಕೆ ಸೇರಿದ 1200 ಚದರ್ ಅಡಿ ಜಾಗವನ್ನು ಅಂಗನವಾಡಿ ನಿರ್ಮಿಸಲು ನೀಡುವಂತೆ ಗ್ರಾಮಸ್ಥರು ಕೇಳಿದ್ದಾರೆ. ಜಾಗ ನೀಡಲು ಯೋಧನ ಕುಟುಂಬ ನಿರಾಕರಿಸಿದೆ. ಹೀಗಾಗಿ ಯೋಧನ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.
ಯೋಧನ ಕುಟುಂಬದ ಜತೆಗೆ ಯಾರೂ ಮಾತನಾಡಬಾರದು. ಸಹಾಯ ಮಾಡಬಾರದು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂಬ ನಿರ್ಣಯವನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ. ಯೋಧನ ಕುಟುಂಬ ಸದಸ್ಯರ ಜತೆಗೆ ಮಾತನಾಡಿದ್ರೆ 5 ಸಾವಿರ ರೂ ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿದ ಮೂವರಿಂದ ತಲಾ 5 ಸಾವಿರ ರೂ ದಂಡ ವಸೂಲಿ ಮಾಡಲಾಗಿದೆ. ಈ ಸಂಬಂಧ 2017ರಲ್ಲೇ ಗ್ರಾಮಸ್ಥರ ಕಿರುಕುಳದ ಬಗ್ಗೆ ಯೋಧನ ಕುಟುಂಬ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಮುಂದಿನ ತಿಂಗಳು ಯೋಧ ಹಾಗೂ ಅವರ ಸಹೋದರನ ನಿಶ್ಚಿತಾರ್ಥ ನಿಗದಿಯಾಗಿದ್ದು, ಗ್ರಾಮಸ್ಥರು ಇಬ್ಬರ ನಿಶ್ಚಿತಾರ್ಥಕ್ಕೆ ಬಹಿಷ್ಕಾರ ಹಾಕಿದ್ದಾರೆ. ಯೋಧನ ನಿಶ್ಚಿತಾರ್ಥಕ್ಕೆ ಯಾವ ಅರ್ಚಕರೂ ಸಹ ಮುಂದೆ ಬರುತ್ತಿಲ್ಲ. ಮದುವೆ ನಿಂತು ಹೋಗುತ್ತೇನೋ ಎಂಬ ಆತಂಕದಲ್ಲಿ ಯೋಧನ ಕುಟುಂಬವಿದೆ. ಹಿರಿಯರು ಕಾರ್ಯಕ್ರಮಕ್ಕೆ ಬಂದು ಆಶೀರ್ವಾದ ಮಾಡಬೇಕು. ಅವರು ದೂರ ಉಳಿದರೆ ಹೇಗೆ ಎಂದು ರಾಮದುರ್ಗ ತಹಶೀಲ್ದಾರ್ ಗಿರೀಶ್ ಸ್ವಾದಿ ಎದುರು ಯೋಧನ ಕುಟುಂಬ ಅಳಲು ತೋಡಿಕೊಂಡಿದೆ.