ಬೆಳಗಾವಿ: ಸಾರಿಗೆ ನೌಕರರ 9 ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ಕೋವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲಿಯೂ ಸಂಬಳ ನೀಡಿದ್ದೇವೆ. ಹೀಗಾಗಿ 6ನೇ ವೇತನ ಆಯೋಗ ಜಾರಿ ಸಾಧ್ಯವೇ ಇಲ್ಲ ಎಂದು ಸಿಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಾಳೆಯಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಎಸ್ವೈ, ರಾಜ್ಯ ಸರ್ಕಾರದಿಂದಲೇ 1,200 ಕೋಟಿ ರೂ. ಸಂಬಳ ಸಾರಿಗೆ ಇಲಾಖೆಗೆ ಕೊಟ್ಟಿದ್ದೇವೆ. ಸಾರಿಗೆ ನೌಕರರ 9 ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ಕೋವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲಿಯೂ ಸಂಬಳ ನೀಡಿದ್ದೇವೆ. ಹೀಗಾಗಿ ಸಾರಿಗೆ ನೌಕರರಲ್ಲಿ ಮುಷ್ಕರ ವಾಪಸ್ ಪಡೆಯಬೇಕೆಂದು ನಾನು ಮನವಿ ಮಾಡುತ್ತೇನೆ ಎಂದರು.
8 ಬೇಡಿಕೆ ಈಡೇರಿಸಿದ ಮೇಲೂ ಹಠ ಮಾಡುವುದು ಸರಿಯಲ್ಲ. ದಯಮಾಡಿ ಹಠವನ್ನು ಬಿಡಿ, ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಖಾಸಗಿ ಬಸ್‌ಗಳಿಗೆ ಪರ್ಮೀಟ್ ಕೊಡ್ತೀವಿ. 6ನೇ ವೇತನ ಜಾರಿಗೆ ತರುವ ಪ್ರಶ್ನೆಯೇ ಇಲ್ಲ, ಇದು ಸಾಧ್ಯವಾಗದ ಪ್ರಶ್ನೆ. 8 ಪರ್ಸೆಂಟ್ ವೇತನ ಹೆಚ್ಚಳ ನೀಡಲು ಯೋಚನೆ ಮಾಡಿದ್ದೇವೆ, ಅದನ್ನ ಕೊಡುತ್ತೇವೆ. ನಮ್ಮ ಮಾತಿಗೆ ಬೆಲೆ ಕೊಟ್ಟು ಮುಷ್ಕರ ವಾಪಸ್ ಪಡೀತಾರಾ ಕಾದು ನೋಡೋಣ. ದುರುದ್ದೇಶದಿಂದ ಉದ್ದೇಶಪೂರ್ವಕವಾಗಿ ಸತ್ಯಾಗ್ರಹ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಸ್ಕಿಯಲ್ಲಿ ವಿಜಯೇಂದ್ರ ಹಣದ ಹೊಳೆ ಹರಿಸುತ್ತಿದ್ದಾರೆಂಬ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ, ಕಾಂಗ್ರೆಸ್ಗೆ ಸೋಲು ನಿಶ್ಚಯವಾದ ಮೇಲೆ ವಿಜಯೇಂದ್ರ ಮೇಲೆ ಆರೋಪ ಮಾಡ್ತಿದಾರೆ. ಎಲ್ಲಾ ಕಡೆ ಸೋಲು ನಿಶ್ಚಯವಾಗಿದೆ. ಹೀಗಾಗಿ ಸಿದ್ದರಾಮಯ್ಯ ಆರೋಪ ಮಾಡ್ತಿದ್ದಾರೆ. ಮಸ್ಕಿ ಸಹಿತ 3 ಉಪಚುನಾವಣೆಯಲ್ಲಿ ನಾವೇ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.