ಬೆಳಗಾವಿ: ದೇಶ ಕಂಡ ಮಹಾಸಂತ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ವಿಧಿವಶರಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶ್ರೀಕೃಷ್ಣ ಮಠದಲ್ಲಿ ನೀರವ ಮೌನ ಆವರಿಸಿದೆ.
ನಗರದ ಆರ್‌ಪಿಡಿ ರಸ್ತೆಯಲ್ಲಿರುವ ಕೃಷ್ಣಮಠದ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಅಖಿಲ ಭಾರತ ಮಾಧ್ವ ಮಹಾಮಂಡಲ ವತಿಯಿಂದ 2014ರಲ್ಲಿ ಬೆಳಗಾವಿಯ ಆರ್‌ಪಿಡಿ ಕ್ರಾಸ್ ಬಳಿ ಶ್ರೀಕೃಷ್ಣಮಠ ಸ್ಥಾಪನೆ ಮಾಡಲಾಗಿತ್ತು. ಪೇಜಾವರ ಶ್ರೀಗಳ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಲು ಜಿಲ್ಲೆಯಿಂದ ಶಿಷ್ಯಂದಿರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿಗೆ ಪ್ರಯಾಣ ಬೆಳೆಸುವ ಮುನ್ನ ಬೆಳಗಾವಿಯ ಕೃಷ್ಣಮಠದಲ್ಲಿ ಈಟಿವಿ ಭಾರತ ಜತೆ ಮಾತನಾಡಿದ ಪೇಜಾವರ ಶ್ರೀಗಳ ಶಿಷ್ಯರಾದ ನರಸಿಂಹ ಕುಲಕರ್ಣಿ ಭಾವುಕರಾದರು.
ಪೇಜಾವರ ಶ್ರೀಗಳು ಎಲ್ಲಾ ವರ್ಗದವರ ಏಳಿಗೆಗೆ ಶ್ರಮಿಸುವ ಸಾಧಕರಾಗಿದ್ದರು. ಅನೇಕ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಅನುಕೂಲ ಮಾಡಿಕೊಟ್ಟಿದ್ದರು. ಬೆಳಗಾವಿ ನಗರದಲ್ಲೂ ವಿದ್ಯಾರ್ಥಿ ನಿಲಯ ಕಟ್ಟಿದ್ದಾರೆ. ನವೆಂಬರ್ 13 ರಂದು ಉತ್ತರಾಧಿಮಠದ ಕಾರ್ಯಕ್ರಮಕ್ಕೆ ಬಂದಿದ್ದರು. ಮತ್ತೆ ಇದೇ ಡಿಸೆಂಬರ್ ನಾಲ್ಕರಂದು ಬೆಳಗಾವಿ ನಗರಕ್ಕೂ ಆಗಮಿಸಿದ್ದರು ಎಂದು ಸ್ಮರಿಸಿದ್ರು.