ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 2024-25ನೇ ಸಾಲಿನ ತೆರಿಗೆ ಹೆಚ್ಚಳ ಮಾಡುವ ಕುರಿತು ಮೇಯರ್ ಶೋಭಾ ಸೋಮನಾಚೆ ಅವರು ಮಾಡಿರುವ ಸಹಿ ಪತ್ರ ಕಾಣೆಯಾಗಿದ್ದು, ಪಾಲಿಕೆಯ ಪರಿಷತ್ ಕಾರ್ಯದರ್ಶಿ ವಿರುದ್ಧ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಾಲಿಕೆಯ ಕೌನ್ಸಿಲ್ ಸಭೆಯ ನಿರ್ಧಾರವನ್ನು 2023-24ರ ಬದಲು 2024-25 ಎಂದು ಮೇಯರ್ ಸಹಿ ಮಾಡಿರುವ ಪತ್ರ ಕಳ್ಳತನವಾಗಿದೆ. ಈ ವಿಚಾರ ನಿನ್ನೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಅಂತಿಮವಾಗಿ ತನಿಖೆಗೆ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದಾದ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಫೈಲ್ ಕಳ್ಳತನ ಆಗಿರುವ ಕುರಿತು ತನಿಖೆ ನಡೆಸುವಂತೆ ಪಾಲಿಕೆ ಆಯುಕ್ತರು ನಿನ್ನೆ ರಾತ್ರಿಯೇ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ ಅವರು, ಮೇಯರ್ ಮೇಲೆ ದೂರು ಕೊಟ್ಟಿದ್ದೇವೆ. ಆದರೆ, ಪೊಲೀಸರು ಏನು ಮಾಡಿದ್ದಾರೆ ಗೊತ್ತಿಲ್ಲ. ಮುಖ್ಯ ಫೈಲ್ ಕಳ್ಳತನವಾಗಿದೆ. ಅದರಲ್ಲಿ ಮೇಯರ್ ಅವರು ಸಹಿ ಮಾಡಿದ್ದಾರೆ. ಬಿಜೆಪಿಯವರು ಕಮಿಷನರ್ ಮಾತ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಮೇಯರ್ ಸಹಿ ಮಾಡಿದ ನಂತರವೇ ಪಾಲಿಕೆ ಆಯುಕ್ತರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಹಾಗಾಗಿ, ಫೈಲ್ ಎತ್ತಿಟ್ಟಿದ್ದಾರೆ. ಮಿಸ್ಸಿಂಗ್, ಫೈಲ್ ಸಿಕ್ಕರೆ ಸತ್ಯಾಂಶ ಹೊರಗೆ ಬರುತ್ತದೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಫೈಲ್ ಪಾಲಿಟಿಕ್ಸ್ ಜೋರಾಗಿದ್ದು, ಮಹತ್ವದ ಫೈಲ್ ಕಳುವಾಗಿರುವ ಬಗ್ಗೆ ಮಾರ್ಕೆಟ್ ಠಾಣೆಯಲ್ಲಿ ಪಾಲಿಕೆ ಆಯುಕ್ತರು ದೂರು ದಾಖಲಿಸಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಮೇಯರ್ ಅವರೇ ಸುಪ್ರೀಂ ಇರೋದರಿಂದ ಸರಿ ಮಾಡುವುದು ಬಿಟ್ಟು ಅವರೇ ಫೈಲ್ ಮಿಸ್ಸಿಂಗ್ ಮಾಡಿ ತಪ್ಪೆಸದ್ದಾರೆ. ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ ಎಂದ ಸತೀಶ್, ಪಾಲಿಕೆಯಲ್ಲಿ ಫೈಲ್ ಕಳ್ಳತನ ಪ್ರಕರಣ ಅಷ್ಟೇ ಅಲ್ಲದೇ, ಕಳೆದ ಆರು ತಿಂಗಳಲ್ಲಿ ಸಾಕಷ್ಟು ಸಮಸ್ಯೆ ಮಾಡಿದ್ದಾರೆ. ಅವುಗಳ ಬಗ್ಗೆಯೂ ತನಿಖೆ ಆಗಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಕಾಂಗ್ರೆಸ್ನಲ್ಲಿ ಮೂಲೆಗುಂಪಾಗಲಿದ್ದಾರೆ, ಬೆಳಗಾವಿ ಟಿಕೆಟ್ ಕೂಡ ಕುಟುಂಬದ ಕೈ ತಪ್ಪಲಿದೆ: ಮುನಿರತ್ನ