ಬೆಳಗಾವಿ: ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರು ರಾಜಕೀಯ ಅನುಕೂಲಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.
ಸಿದ್ದರಾಮಯ್ಯ ಪ್ರೀ ಪ್ಲ್ಯಾನ್ ಮಾಡಿ ನನ್ನ ಹೆಸರು ಹಾಳು ಮಾಡಿದರು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಮಾರಸ್ವಾಮಿ ರಾಜಕೀಯದಿಂದಲೇ ಹೊರಟೋದರಾ? ಗುಡ್ ವಿಲ್ ಇದ್ದರೆ ಅಲ್ವಾ ಹಾಳಾಗಲು. ಗುಡ್ ವಿಲ್ ಇಲ್ಲಾ ಅಂದರೆ ಹಾಳಾಗುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸಮಯಕ್ಕೆ ತಕ್ಕಂತೆ ಅವರು ಸುಳ್ಳು ಹೇಳಿಕೊಂಡು ಹೋಗ್ತಾರೆ. ಅದರಿಂದ ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ ಎಂದು ತಿರುಗೇಟು ನೀಡಿದರು.
ಕಣ್ಣೀರು ಹಾಕುವುದು ದೇವೇಗೌಡರ ಮನೆಯವರ ಸಂಸ್ಕೃತಿ:
ಕಣ್ಣೀರು ಹಾಕುವುದು ದೇವೇಗೌಡರ ಮನೆಯವರ ಸಂಸ್ಕೃತಿ. ಅದೇನು ಹೊಸದಲ್ಲ. ಓಲೈಕೆಗೋ ಮತ್ತು ಇನ್ಯಾರನ್ನೋ ನಂಬಿಸಲು ಕಣ್ಣೀರು ಹಾಕುತ್ತಾರೆ. ಕಾಂಗ್ರೆಸ್ನಿಂದ ಕುಮಾರಸ್ವಾಮಿ ಸಿಎಂ ಆಗಿದ್ದರು. ಆ ಕಣ್ಣೀರಿಗೆ ಬೆಲೆ ಇಲ್ಲ ಎಂದರು.
ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕುಳಿತು ಸರ್ಕಾರ ನಡೆಸಿದ ಸಿಎಂ ಹೆಚ್ಡಿಕೆ:
ಕಾಂಗ್ರೆಸ್ ಶಾಕರಿಗೆ ಹಣ ಕೊಟ್ಟ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಇವರ ಮನೆಯಿಂದ ತಂದು ಹಣ ಕೊಟ್ರಾ. ನಮ್ಮ ಶಾಸಕರು ಬೆಂಬಲ ಕೊಟ್ಟಿದ್ದಕ್ಕೆ ಸಿಎಂ ಆಗಿದ್ದಾರೆ. ಕುಮಾರಸ್ವಾಮಿ ಮಾತಿಗೆ ಉತ್ತರವೇ ಕೊಡಬಾರದು. ಬೇಜವಾಬ್ದಾರಿಯಿಂದ ಕುಮಾರಸ್ವಾಮಿ ಹೇಳುತ್ತಾರೆ. ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕುಳಿತು ಸರ್ಕಾರ ನಡೆಸಿದರು. ಶಾಸಕರ ಕೈಗೆ ಸಿಗದೆ, ಅವರ ಕಷ್ಟ ಸುಖ ಕೇಳಲಿಲ್ಲ. ಕುಮಾರಸ್ವಾಮಿ ಕೇಂದ್ರ ಸ್ಥಳ ವೆಸ್ಟ್ ಎಂಡ್ ಹೋಟೆಲ್ ಆಗಿತ್ತು. ಕರ್ನಾಟಕದಲ್ಲಿ ಹೋಟೆಲ್ನಿಂದ ಅಧಿಕಾರ ನಡೆಸಿದರು. ಆಗ ಕುಮಾರಸ್ವಾಮಿ ಶಾಸಕರಿಗೆ ಸಹಕಾರ ಕೊಡದಿದ್ದಕ್ಕೆ ಸರ್ಕಾರ ಬಿದ್ದಿದೆ. ಕಾಂಗ್ರೆಸ್ ಕಾರಣವಲ್ಲ. ದೇವೇಗೌಡರು ಯಾರನ್ನೂ ಬೆಳೆಸಲ್ಲ, ಅವರ ಕುಟುಂಬಸ್ಥರನ್ನ ಮಾತ್ರ ಬೆಳೆಸುತ್ತಾರೆ ಎಂದು ಕಿಡಿಕಾರಿದರು.
ಎಮ್ಮೆ, ದನಗಳನ್ನ ಆರ್ಎಸ್ಎಸ್ನವರು ಸಾಕಿ ಸಗಣಿ ಎತ್ತಿದ್ದಾರಾ?
ಬಿಜೆಪಿಯವರು ಅಧಿವೇಶನ ಮಾಡುತ್ತಿಲ್ಲ, ಕಾರ್ಯಕಾರಣಿ ಸಭೆ ಮಾಡುತ್ತಿದ್ದಾರೆ. ಸುವರ್ಣಸೌಧ ಕಡೆಗಣನೆ ಮಾಡಿದ್ದಾರೆ. ಕೊರೊನಾ ನೆಪ ಹೇಳಿ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡಲಿಲ್ಲ. ಉತ್ತರ ಕರ್ನಾಟಕದ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಈಗ ಇದೆ. ಎಮ್ಮೆ, ದನಗಳನ್ನು ಆರ್ಎಸ್ಎಸ್ನವರು ಸಾಕಿ ಸಗಣಿ ಎತ್ತಿದ್ದಾರಾ? ರಾಜಕೀಯಕ್ಕೋಸ್ಕರ ಮಾತಾನಾಡುವ ಮತ್ತು ಸಮಾಜ ಒಡೆಯುವುದಕ್ಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈಶ್ವರಪ್ಪನವರ ತಾತನಷ್ಟು ಮಾತನಾಡಬಲ್ಲೆ:
ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈಶ್ವರಪ್ಪನವರ ತಾತನಷ್ಟು ಮಾತನಾಡಬಲ್ಲೆ. ಆದರೆ ನಾನು ಮಾತನಾಡಲು ಹೋಗಲ್ಲ. ನಾನು ಅವರ ಹತ್ತರಷ್ಟು ಮಾತನಾಡಬಹದು. ನನಗೊಂದು ಸಂಸ್ಕೃತಿ, ಸಂಸ್ಕಾರ, ರಾಜಕೀಯ ಭಾಷೆ ಗೊತ್ತಿದೆ. ಅವರ ಹಾಗೆ ನನಗೆ ರಾಜಕೀಯ ಭಾಷೆ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.