ಬೆಳಗಾವಿ : ಬಿಜೆಪಿಗರಿಗೆ ನಾಥೂರಾಮ್ ಗೋಡ್ಸೆಯೇ ಮಹಾತ್ಮ. ಆದರೆ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿ ನಮಗೆ ಮಹಾತ್ಮ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಜಿಲ್ಲೆಯ ಘಟಪ್ರಭಾದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮಹಾತ್ಮ ಗಾಂಧೀಜಿ ಮತ್ತು ನಾ.ಸು.ಹರಡೀಕರ್ ಮನುಷ್ಯತ್ವ ಉಳಿಯಬೇಕು. ಗಾಂಧೀಜಿ ವಿಶ್ವ ಮಾನವನಾಗಲು ಪ್ರಯತ್ನ ಮಾಡಿದವರು. ಗಾಂಧಿ ಜಯಂತಿ ಆಚರಣೆ ಮಾಡುತ್ತೇವೆ ಅಂದ್ರೆ ಮನುಷ್ಯರಾಗಲು ಪ್ರಯತ್ನ ಮಾಡಬೇಕು.
ಮತಾಂಧರೇ ಗಾಂಧೀಜಿ ಅವರನ್ನು ಕೊಂದು ಹಾಕಿದರು. ಆರ್‌ಎಸ್‌ಎಸ್ ಮತಾಂಧರ ಆರಾಧ್ಯದೈವ. ಬಿಜೆಪಿಯವರದ್ದು ಜಾತಿ ಒಡೆಯುವುದು, ಕೋಮುವಾದ ಮಾಡುವುದೇ ಕೆಲಸ. ಸಂವಿಧಾನ ಇಂದು ಕೋಮುವಾದಿಗಳ ಕೈಯಲ್ಲಿದೆ ಎಂದು ಕಿಡಿಕಾರಿದರು.
ಸಂವಿಧಾನ ಸುಟ್ಟು ಹಾಕಬೇಕು ಎಂದಿದ್ದ ತೇಜಸ್ವಿಸೂರ್ಯ ಇಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ. ಇಂಥವರ ಕೈಯಲ್ಲಿ ಇಂದು ಸಂವಿಧಾನ ಸಿಕ್ಕಿ ಹಾಕಿಕೊಂಡಿದೆ. ಅದನ್ನು ನಾವು ಎತ್ತಿ ಹಿಡಿಯಬೇಕಿದೆ. ನಾನು ಮೊದಲಿನಿಂದ್ಲೂ ಕಾಂಗ್ರೆಸ್ ಸೇವಾದಳದಲ್ಲಿಲ್ಲ. ನಾನು ಮಧ್ಯೆ ಬಂದು ಕಾಂಗ್ರೆಸ್‌ಗೆ ಸೇರಿಕೊಂಡವನು. ಆದರೆ, ಬಹಳಷ್ಟು ಜನ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಆರ್‌ಎಸ್‌ಎಸ್ ಸಂಸ್ಥಾಪಕ ಕೂಡ ಮೊದಲು ಸೇವಾದಳದಲ್ಲಿದ್ದವರು. ಬ್ಯಾಚ್ ಹಾಕಿಕೊಂಡು ಬಂದು ಕಾಂಗ್ರೆಸ್‌ನಲ್ಲಿದ್ದೇನೆ ಅಂದ್ರೇ ಆಗುವುದಿಲ್ಲ. ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧನಾಗಿರಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಗಾಂಧೀಜಿಯವರ ತತ್ವವೇ ಕಾಂಗ್ರೆಸ್‌ನ ತತ್ವ. ಇದನ್ನ ನಾವೆಲ್ಲರೂ ಅಳವಡಿಸಿಕೊಂಡಿದ್ದೇವೆ. ಸಂವಿಧಾನ ಪೀಠಿಕೆ ಓದಿ ನಾನು ಅಧಿಕಾರ ತೆಗೆದುಕೊಂಡಿದ್ದೇನೆ. ಬಿಜೆಪಿ ಜಾತಿ, ಮತ ಧರ್ಮದ ಹೆಸರಿನಲ್ಲಿ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಲ್‌ಪಿ ಸಭೆಯಲ್ಲಿ ಚರ್ಚೆ ಮಾಡಿ ಘಟಪ್ರಭಾ ಸೇವಾದಳ ತರಬೇತಿ ಕೇಂದ್ರಕ್ಕೆ ಮೂರು ಕೋಟಿ ಕೊಡಿಸುತ್ತೇನೆ. ಸತೀಶ್ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮೇಲೆ ಯಾವ ಜವಾಬ್ದಾರಿ ಬೇಕು ಅಂತಾ ಕೇಳಿದ್ದೆ. ಆಗ ತರಬೇತಿ ನೀಡುವ ಜವಾಬ್ದಾರಿ ಕೊಡಿ ಅಂದಿದ್ದರು. ಉತ್ತರ ಕನ್ನಡ, ಉಡುಪಿಯಲ್ಲಿ ಮತ್ತು ಬೆಂಗಳೂರಿನಲ್ಲಿ ಒಂದು ತರಬೇತಿ ಕೇಂದ್ರ ಇದ್ದು. ಇನ್ನು ಒಂದು ಸೇವಾದಳ ತರಬೇತಿ ಕೇಂದ್ರ ಮಾಡುವ ಚಿಂತನೆ ನಡೆದಿದೆ ಎಂದರು.