ಬೆಳಗಾವಿ: ಕೋರ್ಟ್ ತಡೆಯಾಜ್ಞೆ ಆದೇಶ ಉಲ್ಲಂಘಿಸಿದ್ದ ಆರೋಪದಡಿ ನಿಕಟಪೂರ್ವ ಡಿಸಿಪಿ ಸೀಮಾ ಲಾಟ್ಕರ್ ಅವರಿಗೆ ಬೆಳಗಾವಿಯ 10ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ನಗರದ ಗಾಂಧಿನಗರದ ನಿವಾಸಿ ಮಲ್ಲಿಕ್ ಜಾನ್ ಪಠಾಣ್ ಹಾಗೂ ಸಂಬಂಧಿಕರಿಗೆ ಸೇರಿದ ಆಸ್ತಿ ವ್ಯಾಜ್ಯ ಸಂಬಂಧ ಸಿಆರ್ಪಿಸಿ ಕಲಂ 107ರಡಿ ಡಿಸಿಪಿ ಆಗಿದ್ದ ಸೀಮಾ ಲಾಟ್ಕರ್ ವಿಚಾರಣೆ ನಡೆಸಿದ್ದರು. ಪ್ರಕರಣ ಸಂಬಂಧ ಡಿಸಿಪಿ ಸೀಮಾ ಲಾಟ್ಕರ್ ಅವರು ಮಲ್ಲಿಕ್ ಜಾನ್ ಅವರಿಗೆ ಕಳೆದ ಜೂನ್ 6 ರಂದು ನೋಟಿಸ್ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮಲ್ಲಿಕ್ ಜಾನ್ ಪಠಾಣ್ ನ್ಯಾಯಾಲಯದ ಮೊರೆ ಹೋಗಿದ್ದರು.
ಸೀಮಾ ಲಾಟ್ಕರ್ ಹೊರಡಿಸಿದ್ದ ನೋಟಿಸ್ಗೆ ಬೆಳಗಾವಿ ನ್ಯಾಯಾಲಯ ಜೂನ್ 29 ಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು. ಆದೇಶ ಪ್ರತಿಯನ್ನು ಮಲ್ಲಿಕ್ ಜಾನ್ ಪಠಾಣ್ ಕಮೀಷನರ್ ಕಚೇರಿಗೆ ಸಲ್ಲಿಸಿದ್ದರು. ಅಕ್ಟೋಬರ್ 9 ರಂದು ಇದೇ ಪ್ರಕರಣದಡಿ ವಿಚಾರಣೆ ನಡೆಸಿದ್ದ ಸೀಮಾ ಲಾಟ್ಕರ್ ಮಲ್ಲಿಕ್ ಜಾನ್ ಗೆ ಮತ್ತೆ ನೋಟಿಸ್ ನೀಡಿದ್ದರು. ತಡೆಯಾಜ್ಞೆ ಇದ್ದರೂ ಮತ್ತೇ ನೋಟಿಸ್ ನೀಡಿದ್ದನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ನವೆಂಬರ್ 26ಕ್ಕೆ ನ್ಯಾಯಾಲಯಕ್ಕೆ ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ 10 ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹೇಮಂತ್ ಅವರು ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಅರ್ಜಿದಾರರ ಪರ ವಕೀಲ ಜಾಹೀರ್ ಹತ್ತರಕಿ ವಕಾಲತ್ತು ವಹಿಸಿದ್ದರು.