ಚಿಕ್ಕೋಡಿ: ಸಹಕಾರ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ನನ್ನನ್ನು ಬಿಜೆಪಿ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಯನ್ನಾಗಿ ಘೋಷಿಸಿದೆ ಎಂದು ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಈಗಾಗಲೇ ಜನಪರ ಯೋಜನೆಗಳನ್ನು ಜಾರಿ ತಂದಿದ್ದಾರೆ. ಬೇಟಿ ಬಚಾವೊ, ಬೇಟಿ ಪಡಾವೊ, ಉಜ್ವಲ ಯೋಜನೆ, ಜನಧನ್ ಹಾಗೂ ರೈತ ಸಮ್ಮಾನ್ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇನ್ನೂ ಹೆಚ್ಚಿನ ಕೆಲಸ ಮಾಡಲು ಮೋದಿಯವರಿಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ ಅವರ ಕೈ ಬಲಪಡಿಸೋಣ ಎಂದು ಕರೆ ನೀಡಿದರು.
65 ವರ್ಷದಲ್ಲಿ ಆಗಲಾರದ ಕೆಲಸವನ್ನು ಐದು ವರ್ಷಗಳಲ್ಲಿ ಮೋದಿ ಮಾಡಿದ್ದಾರೆ. ಇವತ್ತು ಭಾರತವನ್ನು ವಿಶ್ವದಲ್ಲಿ ಅತಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಹೀಗಾಗಿ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ ಎಂದರು.
ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಸೋತಿತ್ತು. ಆದ್ರೆ ಈ ಚುನಾವಣೆಯಲ್ಲಿ ಅಣ್ಣಾಸಾಹೇಬ ಜೊಲ್ಲೆಯವರನ್ನು ಗೆಲ್ಲಿಸಿ. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಿ ಎಂದು ಮನವಿ ಮಾಡಿದರು.