ಬೆಳಗಾವಿ/ಬೆಂಗಳೂರು: ಶೇ.50ರ ಮೀಸಲಾತಿ ನಿಯಮವಿದ್ದರೂ ಮೀಸಲಾತಿ ಹೆಚ್ಚಳ ಕುರಿತು ಸ್ಪಷ್ಟ ನಿಲುವು ತಳೆಯದೆ ಕೇವಲ ರಾಜಕೀಯ ಲಾಭಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸಿದ್ದು, ಈ ಬಗ್ಗೆ ಸತ್ಯಾಸತ್ಯತೆಯನ್ನು ಜನತೆಯ ಮುಂದಿಡುವಂತೆ ನಿಯಮ 59ರ ಅಡಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಪರಿಗಣಿಸಲು ನಿರಾಕರಿಸಿದ್ದು, ಎಸ್ಸಿ ಎಸ್ಟಿ ಮೀಸಲಾತಿ ಕುರಿತ ವಿಧೇಯಕ ಬಂದಾಗ ಸುದೀರ್ಘ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ರೂಲಿಂಗ್ ನೀಡಿದರು.
ವಿಧಾನ ಪರಿಷತ್ನಲ್ಲಿ ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದೆ. ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಈ ಸಮುದಾಯವನ್ನು ತಪ್ಪುದಾರಿಗೆ ಎಳೆಯುತ್ತಿದೆ. ಶೇ.50ರ ಮೀಸಲಾತಿ ಮಿತಿ ಮೀರಬಾರದು ಎಂದಿದ್ದರೂ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು ಕಾನೂನು ತೊಡಕು ಎದುರಾಗಲಿದೆ. ಇತರ ಸಮುದಾಯಗಳೂ ಮೀಸಲಾತಿ ಹೋರಾಟ ನಡೆಸುತ್ತಿವೆ.
ಇಂತಹ ಸಂದರ್ಭದಲ್ಲಿ ಎಸ್ಸಿ ಎಷ್ಟಿ ಮೀಸಲಾತಿ ಹಚ್ಚಳ ಸ್ವಾಗತಾರ್ಹವಾದರೂ ಸ್ಪಷ್ಟತೆ ಇಲ್ಲದೆ ಕೇವಲ ಆ ಸಮುದಾಯಗಳ ಮತಕ್ಕಾಗಿ ಇದನ್ನು ಮಾಡಿದೆ ಹಾಗಾಗಿ ಇದನ್ನು ಜನರಿಗೆ ತಿಳಿಸಲು ನಿಯಮ 59ರ ಅಡಿ ನಿಲುವಳಿ ಸೂಚನೆ ಮಂಡಿಸುತ್ತಿದ್ದು ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿಗಳಿಗೆ ಮನವಿ ಮಾಡಿದರು. ಕಾಂಗ್ರೆಸ್ ಮಂಡಿಸಿದ ನಿಲುವಳಿ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ನ್ಯಾ.ನಾಗಮೋಹನ್ ದಾಸ್ ವರದಿಯಂತೆ ಮೀಸಲಾತಿ ಹೆಚ್ಚಿಸಿದ್ದೇವೆ ಎಂದರು.
ರಾಜಕಾರಣ ಏನೇ ಇರಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸಲಾಗಿದೆ. ಸದನದಲ್ಲಿ ಬಿಲ್ ಮಂಡಿಸಲಿದ್ದೇವೆ. ಟೀಕೆ ಟಿಪ್ಪಣಿ ಏನೇ ಇದ್ದರೂ ಸಮಾಜದ ತಳಮಟ್ಟದ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ನಿರ್ಣಯಕ್ಕೆ ಬೆಂಬಲ ಕೊಡಬೇಕು, ಈಗಾಗಲೇ ಕೆಳಮನೆಯಲ್ಲಿ ಬಿಲ್ ಮಂಡನೆಯಾಗಿದೆ. ಇಲ್ಲಿಯೂ ಮಂಡನೆ ಮಾಡಲಿದ್ದೇವೆ ಹಾಗಾಗಿ ಈ ನಿಲುವಳಿ ಸೂಚನೆ ಪರಿಗಣಿಸುವುದು ಬೇಡ ಬಿಲ್ ಮೇಲೆ ಚರ್ಚೆ ನಡೆಸೋಣ, ಸರ್ವಾನುಮತದ ನಿರ್ಣಯ ಕೇಂದ್ರಕ್ಕೆ ಕಳಿಸೋಣ ಎಂದರು.
ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಹರಿಪ್ರಸಾದ್, ಮೀಸಲಾತಿಗೆ ವಿರೋಧವಿಲ್ಲ ಆದರೆ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠದಲ್ಲಿ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ನಮ್ಮ ಸರ್ಕಾರ ತಮಿಳುನಾಡಿನದ್ದನ್ನು ಉಲ್ಲೇಖಿಸಿದೆ ಅದರೆ ತಮಿಳುನಾಡಿನ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಕೇಂದ್ರಕ್ಕೆ ಕಳಿಸಿದೆ. ಆದರೆ ಅದು 30 ವರ್ಷದಿಂದ ಕೋರ್ಟ್ನಲ್ಲಿದೆ. ಈಗಲೂ ನಾವು ಇಲ್ಲಿ ಬಿಲ್ ಪಾಸ್ ಮಾಡಿಕೊಟ್ಟರೆ ವಿವಿಧ ಸಮಿತಿ, ಸಂಸತ್ತು ನಂತರ ರಾಷ್ಟ್ರಪತಿ ಬಳಿಗೆ ಹೋಗಬೇಕು. ಕೇಂದ್ರದ ಸಚಿವರೇ ಶೇ.50 ರ ಮೀಸಲಾತಿ ಮಿತಿ ಹೆಚ್ಚಳಕ್ಕೆ ಅವಕಾಶ ನೀಡಲ್ಲ ಎನ್ನುತ್ತಿದ್ದಾರೆ.
ಕೇಂದ್ರದ ಅನುಮತಿ ಇಲ್ಲದೆ ಹೇಗೆ ನೀವು ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಿಸುತ್ತಿದ್ದೀರಿ, ಸಂವಿಧಾನ ತಿದ್ದುಪಡಿ ಕೆಲಸ ಆಗಬೇಕಾಗಿರುವ ಹಿನ್ನಲೆಯಲ್ಲಿ ಮೊದಲ ಅಲ್ಲಿ ಇತ್ಯರ್ಥಪಡಿಸಬೇಕು ಅದು ಬಿಟ್ಟು ಜನರಿಗೆ ಮರುಳು ಮಾಡಬೇಡಿ. ಮರಾಠ ಮೀಸಲಾತಿಯಲ್ಲಿಯೂ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದರು. ಹರಿಪ್ರಸಾದ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ರವಿಕುಮಾರ್, ಮೀಸಲಾತಿ ವಿರೋಧ ಮಾಡುತ್ತೀರಾ ಎಂದು ಕುಟುಕಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಕಿಡಿಕಾರಿ ರವಿಕುಮಾರ್ ವಿರುದ್ಧ ಮುಗಿಬಿದ್ದರು ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಗದ್ದಲ, ವಾಗ್ವಾದ ನಡೆಯಿತು.
ಸದನದಲ್ಲಿ ತೀವ್ರ ಗದ್ದಲವಾದ ಹಿನ್ನಲೆಯಲ್ಲಿ ಪೀಠದಿಂದ ಎದ್ದು ನಿಂತ ಸಭಾಪತಿ ಬಸವರಾಜ ಹೊರಟ್ಟಿ, ನಾನು ಈ ವಿಷಯದ ಬಗ್ಗೆ ಅಧ್ಯಯನ ಮಾಡಿದ್ದೇನೆ. ಎಲ್ಲರೂ ಯಾಕೆ ಎದ್ದು ನಿಲ್ಲುತ್ತೀರಿ, ಅನುಮತಿ ಪಡೆಯದೇ ಯಾರೇ ಮಾತನಾಡಿದರೂ ಕಡತಕ್ಕೆ ಹೋಗಬಾರದು ಎಂದು ಸೂಚಿಸಿದರು. ಬಳಿಕ ಸರ್ಕಾರದ ಪರವಾಗಿ ಮಾತನಾಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಕಾಂಗ್ರೆಸ್ ಪಕ್ಷದ ನಾಯಕನ್ನು ಕೂರಿಸಿಕೊಂಡೇ ನಾವು ಎರಡು ಬಾರಿ ಸಭೆ ನಡೆಸಿದ್ದೇವೆ.
ಮೀಸಲಾತಿ ಮಾಡಿದಾಗ ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂದು ತಿಳಿಸಿ ಅದು ಸಂಸತ್ತಿನಲ್ಲಿ ಆಗುವವರೆಗೂ ಕಾಯಲು ಸಾಧ್ಯವಾಗಲ್ಲ ಕೂಡಲೇ ಜನರಿಗೆ ಉಪಯೋಗ ಆಗಬೇಕು ಎಂದು ಸಲಹೆ ನೀಡಿ ಕೂಡಲೇ ರಾಜ್ಯದಲ್ಲಿ ಜಾರಿಗೆ ತನ್ನಿ ಎಂದೇ ಪ್ರತಿಪಕ್ಷಗಳ ನಾಯಕರು ಸಲಹೆ ನಡೆಸಿದ್ದರು. ಕಾನೂನು ಹೋರಾಟ, ಸಂಸತ್ತಿನಲ್ಲಿ ಪಾಸ್ ಮಾಡಿಸಿಕೊಳ್ಳುವುದು ನಮ್ಮ ಹಣೆಬರಹ, ನಾವು ಈಗಾಗಲೇ ಮೀಸಲಾತಿ ಹೆಚ್ಚಿಸಿದ್ದು ಅದರ ಪ್ರಕಾರವೇ ಹುದ್ದೆಗಳ ಭರ್ತಿ ವೇಳೆ ನೇಮಕಾತಿ ಮಾಡಿಕೊಳ್ಳಲಿದ್ದೇವೆ. ಇದರಲ್ಲಿ ರಾಜಕೀಯ ಉದ್ದೇಶ ಇಲ್ಲ.
ನ್ಯಾ.ನಾಗಮೋಹನ್ ದಾಸ್ ಸಮಿತಿ ನಿನ್ನೆ ಮೊನ್ನೆ ವರದಿ ಕೊಟ್ಟಿಲ್ಲ. ನಾವು ಈ ಸಮಿತಿ ರಚಿಸಿದ್ದೂ ಅಲ್ಲ. ವರದಿ ಅನುಷ್ಠಾನಕ್ಕೆ ಎಲ್ಲ ಪಕ್ಷ ಒಪ್ಪಿ ಸರ್ಕಾರ ಕ್ರಮ ಜರುಗಿಸಿದೆ. ಕ್ರಮ ಜರುಗಿಸಿದ ನಂತರ ಇವರಿಗೆ ತಳಮಳವಾಗಿದೆ ಬಿಜೆಪಿಯವರಿಗೆ ಲಾಭ ಆಗಲಿದೆ. ಆ ಸಮುದಾಯದವರು ಬಿಜೆಪಿ ಪರ ಬರಲಿದ್ದಾರೆ ಎನ್ನುವ ಆತಂಕಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬದ್ದತೆ ಇದೆ ಎಂದು ಸ್ಪಷ್ಟಪಡಿಸಿದರು. ಅಂತಿಮವಾಗಿ ಪ್ರತಿಪಕ್ಷದ ನಿಲುವಳಿ ಸೂಚನೆ ಮೇಲೆ ಈಗ ಚರ್ಚೆಗೆ ಅವಕಾಶ ನೀಡುವಿದಲ್ಲ. ಎಸ್ಸಿ ಎಸ್ಟಿ ಮೀಸಲಾತಿ ಮಸೂದೆ ಮಂಡನೆಯಾಗಲಿದ್ದು, ಆಗ ಸುದೀರ್ಘವಾದ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಚರ್ಚೆಗೆ ತೆರೆ ಎಳೆದರು.
ಇದನ್ನೂ ಓದಿ: ವಿಸಿಗಳ ನೇಮಕದಲ್ಲಿ ಲಂಚ ತೆಗೆದುಕೊಂಡ ಆರೋಪ: ಪರಿಷತ್ ಕಲಾಪದಲ್ಲಿ ಗದ್ದಲ ಕೋಲಾಹಲ