ಬೆಳಗಾವಿ : ದಕ್ಷಿಣ ಭಾರತದಲ್ಲಿ ಅಪಾರ ಭಕ್ತಗಣ ಹೊಂದಿರುವ ಸವದತ್ತಿಯ ಯಲಮ್ಮಗುಡ್ಡದ ಶ್ರೀ ರೇಣುಕಾದೇವಿ ದೇಗುಲ ಸೆ.28ರಿಂದ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ. 16 ಷರತ್ತು ವಿಧಿಸಿ ದೇಗುಲ ತೆರೆಯಲು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.
ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ಎರಡು ವರ್ಷಗಳಿಂದ ದೇಗುಲಕ್ಕೆ ಭಕ್ತರ ಪ್ರವೇಶ ನಿಷೇಧ ಹೇರಲಾಗಿತ್ತು. ಕಳೆದ ವರ್ಷ ಲಾಕ್‌ಡೌನ್ ಓಪನ್ ಆದ ನಂತರ 18 ದಿನ ಮಾತ್ರ ದೇವಸ್ಥಾನ ತೆರೆಯಲಾಗಿತ್ತು.
ಎರಡನೇ ಅಲೆ ಭೀತಿ ಹುಟ್ಟಿಸಿದ ಕಾರಣ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಕೊರೊನಾ ಹಿನ್ನೆಲೆ ಈ ದೇವಸ್ಥಾನ ಒಟ್ಟು 17 ತಿಂಗಳು ಬಂದ್ ಮಾಡಲಾಗಿತ್ತು. ಭಕ್ತರ ಕೋರಿಕೆ ಹಾಗೂ ಗಡಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಕಾರಣ ದೇಗುಲ ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ.
ಜನಸಂದಣಿ ಆಗುವಂತಹ ಉತ್ಸವ, ಜಾತ್ರೆ ಕಾರ್ಯಕ್ರಮ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ದೇವಸ್ಥಾನ ಟ್ರಸ್ಟ್ಗೆ ಸೂಚಿಸಲಾಗಿದೆ.