ಚಿಕ್ಕೋಡಿ (ಬೆಳಗಾವಿ): ಶಕುನಿ ರೀತಿಯಲ್ಲಿ ಕೆಲಸ ಮಾಡಿ ಬಿ ಎಸ್ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದು ಲಕ್ಷ್ಮಣ ಸವದಿ ಎಂದು ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಹಾಲುಮತದ ಸಮಾಜದ ಮುಖಂಡರಾದ ಸತ್ತಪ್ಪ ಬಾಗೆಣ್ಣವರ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಶಕುನಿ ರೀತಿಯಲ್ಲಿ ಹೈಕಮಾಂಡ್ಗೆ ಸವದಿ ಸುಳ್ಳು ಹೇಳಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಹೈಕಮಾಂಡ್ ಮುಂದೆ ಸುಳ್ಳು ಹೇಳಿ ನಮಗೆ ಹಾಗೂ ಯಡಿಯೂರಪ್ಪ ಅವರಿಗೆ ತೊಂದರೆ ಉಂಟು ಮಾಡಿದರು. ಸುಳ್ಳು ಹೇಳುವುದರಲ್ಲಿ ಸವದಿ ನಿಪುಣ" ಎಂದು ಏಕವಚನದಲ್ಲಿ ಲಕ್ಷ್ಮಣ ಸವದಿ ವಿರುದ್ಧ ಗುಡುಗಿದರು.
ಮುಂದುವರೆದು ಮಾತನಾಡಿ, "ಬಿಜೆಪಿ ಪಕ್ಷ ಬಿಡುವ ಸಮಯದಲ್ಲಿ ಎಲ್ಲರೂ ನಂಬುವ ಹಾಗೇ ಸುಳ್ಳು ಹೇಳಿದರು ಎಂದು ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಚುನಾವಣೆ ಮುಗಿದ ಕೂಡಲೇ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ನಿಂದ ಸವದಿಯನ್ನು ಕೆಳಗೆ ಇಳಿಸುತ್ತೇನೆ. ಬ್ಯಾಂಕಿನಲ್ಲಿರುವ ಎಲ್ಲಾ ಸದಸ್ಯರ ರಾಜೀನಾಮೆ ಕೊಡಿಸಿ ಮತ್ತೊಮ್ಮೆ ಚುನಾವಣೆ ಮಾಡಲಾಗುವುದು. ಆ ಚುನಾವಣೆಯಲ್ಲಿ ಸವದಿ ಹೇಗೆ ಗೆದ್ದು ಬರುತ್ತಾನೆ ಬರಲಿ, ಹೇಗೆ ಗೆಲುವು ಸಾಧಿಸುತ್ತಾನೆ ಅನ್ನೋದನ್ನು ನಾವು ನೋಡುತ್ತೇವೆ" ಎಂದು ರಮೇಶ್ ಜಾರಕಿಹೊಳಿ ಸವದಿ ವಿರುದ್ಧ ಸವಾಲು ಹಾಕಿದ್ದಾರೆ.
ಲಕ್ಷ್ಮಣ ಸವದಿ ವಿರುದ್ಧ ಕೆಂಡಕಾರಿದ ಮಹೇಶ್ ಕುಮಠಳ್ಳಿ: ನಮ್ಮಿಂದಲೇ ಡಿಸಿಎಂ, ವಿಧಾನಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿ ನಮ್ಮ ವಿರುದ್ಧ ಸವದಿ ತಿರುಗಿಬಿದ್ದರು. ನಾವು ಅವಮಾನ ಮಾಡಿಸಿಕೊಂಡು ಸರ್ಕಾರ ರಚನೆ ಮಾಡಿದ್ದೆವು. ಆದರೆ ಸವದಿ ಡಿಸಿಎಂ ಆಗಿ ನಮ್ಮ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಹಣಬಲ ತೋಳ್ಬಲಕ್ಕೆ ಹೆದರುವ ಅವಶ್ಯಕತೆ ಇಲ್ಲ, ಲಕ್ಷ್ಮಣ ಸವದಿಗೆ ಮೋಸ ಆಗಿದ್ದಾದ್ರೂ ಏನು...?. ಈ ಬಾರಿಯ ಚುನಾವಣೆ ಐತಿಹಾಸಿಕವಾಗಲಿದೆ. ಇದು ಕಾಂಗ್ರೆಸ್ ಬಿಜೆಪಿ ಯುದ್ಧವಲ್ಲ ಲಕ್ಷ್ಮಣ ಸವದಿ ನನ್ನ ನಡುವೆ ನಡೆಯುತ್ತಿರುವ ಯುದ್ಧ. ಅಥಣಿಯಿಂದ ಲಕ್ಷ್ಮಣ ಸವದಿ ಮುಕ್ತ ಮಾಡೋ ಯುದ್ಧ ಇದಾಗಿದೆ ಎಂದು ಕುಮಠಳ್ಳಿ ಗುಡುಗಿದರು.
ನಾನೆಂದೂ ಕ್ಷೇತ್ರದಲ್ಲಿ ಯಾರ ಮೇಲೂ ದಬ್ಬಾಳಿಕೆ ಮಾಡಿಲ್ಲ, ಓರ್ವ ಚಿಕ್ಕ ಬಾಲಕ ಸಹ ನನಗೆ 'ಏ ತಮ್ಮಾ ಇಲ್ಲಿ ಬಾ ಅಂತಾನೆ'.. ಅಥಣಿ ತಾಲೂಕಿನಲ್ಲಿ ನಾನು ಎಲ್ಲರಿಗಿಂತ ಚಿಕ್ಕವ ಎಂದು ತಿಳಿದುಕೊಂಡಿದ್ದೇನೆ. ಆದರೆ ಲಕ್ಷ್ಮಣ ಸವದಿಯವರದ್ದು ಹಾಗಲ್ಲ, ಅವರೇ ಅಣ್ಣ.. ಉಳಿದವರನ್ನು ಕೀಳಾಗಿ ನೋಡುತ್ತಾರೆ. ಸವದಿ ನಾನು 2013ರಿಂದ ಬಹಳ ಆತ್ಮೀಯರಾಗಿದ್ದೆವು ವಯಸ್ಸಲ್ಲಿ ರಾಜಕೀಯವಾಗಿ ಅವರು ದೊಡ್ಡವರಿದ್ದಾರೆ. ಹೀಗಾಗಿ ನಾನು ಅವರನ್ನು ಎಲ್ಲಿಯೂ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ಆದ್ರೆ ಸವದಿ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾನು 50 ಕೋಟಿ ರೂ. ಪಡೆದಿದ್ದೇನೆ ಎಂದು ಓರ್ವ ನಾಯಕನೆದುರು ಹೇಳಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ನಿರೂಪಿಸಿ ತೋರಿಸಲಿ. ನಾನು ಬಹಿರಂಗವಾಗಿ ಅವರ ವಿರುದ್ಧ ಅಸಂವಿದಾನಿಕ ಪದಗಳನ್ನು ಬಳಸೋದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಕುಮಠಳ್ಳಿ ಹೇಳಿದ್ರು.
ಇದನ್ನೂ ಓದಿ: ಬೆಳಗಾವಿ ಅಖಾಡದಲ್ಲಿ 6 ನಾರಿಮಣಿಯರು: ಮತದಾರ ಪ್ರಭುಗಳ ಆಶೀರ್ವಾದ ಯಾರಿಗೆ?