ಬೆಳಗಾವಿ: ಬಿಜೆಪಿ ಸರ್ಕಾರ ಮೂರು ವರ್ಷದಲ್ಲಿ ಒಂದೇ ಒಂದು ಮನೆ ನಿರ್ಮಾಣ ಮಾಡಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಸಾವಿರಾರು ಮನೆಗಳನ್ನು ನೀಡಿದ್ದೇವೆಂದು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟೀಕಿಸಿದರು.
ವಿಧಾನ ಪರಿಷತ್ ಚುನಾವಣೆಯ ಪ್ರಚಾರಾರ್ಥವಾಗಿ ಬೈಲಹೊಂಗಲ ಮತಕ್ಷೇತ್ರದ ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಈಗಿರುವ ರಸ್ತೆಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದ್ದವು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಒಂದೇ ಒಂದು ಮನೆ, ರಸ್ತೆಯನ್ನು ಮಾಡಿಲ್ಲ ಎಂದರು.
ಬಿಜೆಪಿಯವರು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಾರೆ. ದಿಲ್ಲಿಯ ಅವರ ಬಾಸ್ (ಪ್ರಧಾನಿ ಮೋದಿ) ಸುಳ್ಳು ಹೇಳಿದ ತಕ್ಷಣವೇ ಇಲ್ಲಿನ ನಾಯಕರು, ಮುಖಂಡರು ಸಹ ಸುಳ್ಳುಗಳನ್ನು ಹೇಳಲು ಪ್ರಾರಂಭ ಮಾಡುತ್ತಾರೆ. ಪ್ರವಾಹದಲ್ಲಿ ಮನೆ ಕಳೆದುಕೊಂಡ ಬಡವರು ಪರಿಹಾರಕ್ಕಾಗಿ ಅಲೆದು ಸುಸ್ತಾಗಿದ್ದಾರೆಂದು ಹೇಳಿದರು.
'ನಮ್ಮ ಕಡೆ ಗೆಲ್ಲುವಷ್ಟು ಮತದಾರರು ಇದ್ದಾರೆ':
ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಿಂದ ಗೊಂದಲ ಆಗಿದೆ. ನಮ್ಮ ಕಡೆ ಗೆಲ್ಲುವಷ್ಟು ಮತದಾರರಿದ್ದಾರೆ. ಆತಂಕಪಡುವ ಅಗತ್ಯವಿಲ್ಲ. ಪಕ್ಷೇತರ ಅಭ್ಯರ್ಥಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಗೆಲ್ಲುವ ತಂತ್ರ ಮಾಡುತ್ತಿದ್ದಾರೆ. ಆದ್ದರಿಂದ ಸದಸ್ಯರು ಹುಷಾರಾಗಿರಿ, ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿ ಬಾಗಿಲು ತೆಗೆಯಬೇಡಿ. ಇಲ್ಲದಿದ್ದರೆ ನಿಮ್ಮನ್ನು ಎತ್ತಿಕೊಂಡು ಹೋಗುತ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯಲ್ಲಿ ವ್ಯಕ್ತಿಗತ ಲಾಭಕ್ಕಾಗಿ ಚುನಾವಣೆ ಮಾಡುತ್ತಾರೆ. ಆದರೆ ನಾವು ಹಾಗಲ್ಲ, ಪಕ್ಷದ ಅಭ್ಯರ್ಥಿ ಗೆದ್ದರೆ ಪಕ್ಷಕ್ಕೆ ಶಕ್ತಿ ಬರಲಿದೆ. ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿಗೆ ಮತ ನೀಡಿ ಆಶೀರ್ವಾದ ಮಾಡಿ, ನಿಮ್ಮ ಕೆಲಸ ಮಾಡಲು ಅವಕಾಶ ನೀಡಬೇಕು ಎಂದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕಣದಲ್ಲಿರುವ ಕೆಲವರು ಸುಮ್ಮನೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಅದಕ್ಕೆಲ್ಲ ಮರುಳಾಗುವುದಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಚನ್ನರಾಜ ಹಟ್ಟಿಹೊಳಿಯವರನ್ನು ಡಿಸೆಂಬರ್ 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲ ಆದ್ಯತೆಯ ಮತ ನೀಡಿ ಬಹುಮತಗಳಿಂದ ಆರಿಸಿ ತನ್ನಿರಿ ಎಂದು ವಿನಂತಿಸಿದರು.
ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಹೋದೆಡೆಯಲ್ಲೆಲ್ಲಾ ನಮಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ನನಗೆ ಕೆಲಸ ಮಾಡುವ ಹುಮ್ಮಸ್ಸಿದೆ. ವಿಕೇಂದ್ರೀಕರಣ ವ್ಯವಸ್ಥೆಯ ಕುರಿತು ಸಾಕಷ್ಟು ತಿಳಿದುಕೊಂಡಿದ್ದೇನೆ. ನಿಜವಾದ ಪ್ರತಿನಿಧಿಯಾಗಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.