ಬೆಳಗಾವಿ: ಪ್ರಶಸ್ತಿಗಾಗಿ ಬಿಜೆಪಿ ಕಂಡಲೆಲ್ಲ ಶೌಚಗೃಹಗಳನ್ನು ನಿರ್ಮಾಣ ಮಾಡಿ, ಮಾರ್ಕ್ಸ್ ತೆಗೆದುಕೊಂಡಿದೆ. ಸದ್ಯ ಶೌಚಾಲಯಗಳು ನಿರ್ವಹಣೆ, ನೀರಿನ ವ್ಯವಸ್ಥೆ ಇಲ್ಲದೆ ಹಾಳಾಗಿವೆ. ಆದರೆ ಲೆಕ್ಕ ಮಾತ್ರ ಪಕ್ಕಾ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಪಂಚಾಯತ್ ಸಂಘಟನೆ ವತಿಯಿಂದ ಆಯೋಜಿಸಿದ್ದ, ಜಿಲ್ಲಾ ಮಟ್ಟದ ಕಾಂಗ್ರೆಸ್ ಸಮಾವೇಶಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು .ಮೋದಿ ಸರ್ಕಾರ ಬಿಟ್ಟಿ ಪ್ರಚಾರ ಮಾಡುತ್ತಿದೆ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಸ್ವಚ್ಛ ಭಾರತ ಯೋಜನೆ ಜತೆ, ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು. ಇದಕ್ಕಾಗಿ ವರ್ಷಕ್ಕೆ 33 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಕೂಡ ಆಗಿದೆ. ದೇಶಕ್ಕೆ ಸಾಕಷ್ಟು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಬಿಜೆಪಿ ಸರ್ಕಾರ ಶೌಚಾಲಯ, ಯೋಗ ಅಂತ ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಅಪ್ರಚಾರ ಮಾಡಿಕೊಂಡು, ಚುನಾವಣೆ ಎದುರಿಸುತ್ತಿದೆ. ಕೈ ಕಾರ್ಯಕರ್ತರು ತಳಮಟ್ಟದಿಂದ ಪ್ರಚಾರ ಮಾಡಬೇಕಿದೆ. ಹಳ್ಳಿ-ಹಳ್ಳಿಗೂ ತೆರಳಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಯೋಜನೆಗಳನ್ನು ಜನರಿಗೆ ತಿಳಿಸಬೇಕಿದೆ. ಮೋದಿ ಮಹಾರಾಜರು ಏಳು ವರ್ಷಗಳಲ್ಲಿ ಏನು ಮಾಡಿದ್ದಾರೆ?. ತವರು ರಾಜ್ಯ ಗುಜರಾತ್ ದಲ್ಲಿ ಕಂಡಲೆಲ್ಲ ಕಸದ ರಾಶಿ ಬಿದ್ದಿದೆ. ಇನ್ನು ದೇಶವನ್ನು ಹೇಗೆ ಸ್ವಚ್ಚ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿಗೆ ತಲೆ ಕೆಟ್ಟಿದೆ ಮನಬಂದತೆ ಆಡಳಿತ ನಡೆಸಿ, ಪಾಲಿಕೆ ಚುನಾವಣೆಯನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸುತ್ತಿದೆ. ಈಗಾಗಲೇ ಚುನಾವಣೆ ಮುಗಿದ ವಿಷಯ, ಕಾಂಗ್ರೆಸ್ ನವರು 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ನಮ್ಮ ಲೆಕ್ಕಾಚಾರ ಸರಿಯಾಗಿದೆ. ಅದರ ಬಗ್ಗೆ ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಗುಡುಗಿದರು.