ಚಿಕ್ಕೋಡಿ : ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯ ಚಿಕ್ಕೋಡಿ ಹಾಗೂ ಗೋಕಾಕ್‌ನಲ್ಲಿ ಕೋವಿಡ್ ಕೇಂದ್ರಗಳನ್ನು ಆರಂಭಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೆ ಪತ್ರ ಬರೆದಿದ್ದಾರೆ.
ಕೊರೊನಾ ಸೋಂಕು ತಡೆಗಟ್ಟಲು ಅಗತ್ಯ ಸೌಲಭ್ಯಗಳನ್ನ ಕಲ್ಪಿಸುವುದರ ಜೊತೆಗೆ ಹೋಬಳಿ ಮಟ್ಟದಲ್ಲಿಯೂ ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಿ. ಈಗಾಗಲೇ ಕೊರೊನಾದಿಂದ ಜಿಲ್ಲೆಯಲ್ಲಿ ಹಲವಾರು ಜನ ಸಾವನ್ನಪ್ಪಿದ್ದಾರೆ. ಹಾಗಾಗಿ ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿಯೂ ಕೋವಿಡ್ ಸೆಂಟರ್ ಆರಂಭಿಸಿ, ಸಿಬ್ಬಂದಿ ನೇಮಕಾತಿ ಮಾಡಿ ಅಗತ್ಯ ಸಕಲರಣೆಗಳನ್ನು ಪೂರೈಸುವಂತೆ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 2 ಕೋವಿಡ್ ಟೆಸ್ಟಿಂಗ್ ಲ್ಯಾಬ್ ಇದ್ದು, ಹೆಚ್ಚುವರಿಯಾಗಿ ಗೋಕಾಕ್ ಮತ್ತು ಚಿಕ್ಕೋಡಿಯಲ್ಲಿಯೂ ಲ್ಯಾಬ್ ಆರಂಭಿಸುವಂತೆ ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ಗಳ ಕೊರೆತೆ ಸಹ ಇದೆ. ಹಾಗಾಗಿ ಪ್ರತಿ ತಾಲೂಕಿಗೂ ಎರಡು ಆ್ಯಂಬುಲೆನ್ಸ್ ನೀಡಬೇಕು. ಬೆಳಗಾವಿ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಅವಶ್ಯಕತೆಗೆ ಅನುಗುಣವಾಗಿ ಎಲ್ಲ ವಿಧವಾದ ಹುದ್ದೆಗಳನ್ನು ಕೂಡಲೇ ನೇಮಕ ಮಾಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.