ಬೆಳಗಾವಿ: ಬಾಲ್ಕನಿಯಲ್ಲಿ ನಿಂತು ದೀಪ ಹಚ್ಚಿದ್ರೆ, ಚಪ್ಪಾಳೆ ತಟ್ಟಿದ್ರೆ ಕೊರೊನಾ ಹೋಗಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರಧಾನಿ ನರೇಂದ್ರ ಮೋದಿ ಕಾಲೆಳೆದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದರಿಂದ ಕೊರೊನಾ ವೈರಸ್ ಹೋಗುತ್ತದೆ ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಪ್ರಧಾನಿಯಾದವರು ದೇಶದ ಜನರನ್ನು ನಿಜವಾದ ದಾರಿಯಲ್ಲಿ ಕರೆದೊಯ್ಯಬೇಕು. ದೇಶದ ಜನತೆ ಮೊದಲೇ ಸಂಕಷ್ಟದಲ್ಲಿದ್ದಾರೆ. ಲಾಕ್‌ಡೌನ್‌ನಿಂದ ಅಂಗಡಿಗಳೆಲ್ಲವೂ ಬಂದ್ ಆಗಿವೆ. ದೀಪ ಹಚ್ಚುವಂತೆ ಕರೆ ನೀಡಿದ್ರೆ ದೀಪ ತರಲು ಜನತೆ ಎಲ್ಲಿಗೆ ಹೋಗಬೇಕು? ಇಲ್ಲಿ ಅಂಗಡಿ ಬಂದ್ ಆಗಿವೆ. ದೀಪ ತರಲು ಜನರು ಚೀನಾಗೆ ಹೋಗಬೇಕೇ? ಹೋದ್ರೆ, ಕೊರೊನಾ ವೈರಸ್ ಮತ್ತೆ ದೇಶಕ್ಕೆ ಎಂಟ್ರಿ ಆಗುತ್ತೆ ಎಂದು ವ್ಯಂಗ್ಯವಾಡಿದರು.
ದೇಶವನ್ನು ಲಾಕ್‌ಡೌನ್ ಮಾಡಿ, ಸಾಮಾಜಿಕ ಅಂತರ ಕಾಯುವಂತೆ ಮೋದಿ ಅವರೇ ಹೇಳುತ್ತಾರೆ. ಬಳಿಕ ಅವರೇ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ದೇಶದ ಜನರಿಗೆ ಕರೆ ನೀಡುತ್ತಿದ್ದಾರೆ. ದೀಪ ಹಚ್ಚಲು, ಚಪ್ಪಾಳೆ ತಟ್ಟಲು ಜನರು ಒಟ್ಟಿಗೆ ಸೇರುತ್ತಿದ್ದಾರೆ. ಹೀಗೆ ಬಾಲ್ಕನಿಯಲ್ಲಿ ಜನರನ್ನು ಸೇರಿಸಿದ್ರೆ ಲಾಕ್‌ಡೌನ್ ಮಾಡುವ ಉದ್ದೇಶವೇನು? ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಒಂದೇ ಒಳ್ಳೆಯ ಮಾರ್ಗ. ಈ ಕಾರಣಕ್ಕೆ ನಾನು ನಿನ್ನೆ ಬುದ್ಧ, ಬಸವ ಅಂಬೇಡ್ಕರ್ ಭಾವಚಿತ್ರ ಪ್ರದರ್ಶಿಸಿದೆ ಎಂದು ಸಮರ್ಥಿಸಿಕೊಂಡರು.