ಬೆಳಗಾವಿ: ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿರುವ ಕಾರಣ ಮಾಜಿ ಸಚಿವ ಸತೀಶ ಜಾರಕಿಹೊಳಿ ಅಂತಿಮ ಹಂತದ ಮತಬೇಟೆ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರವಾಗಿ ವಿವಿಧ ಸಂಘಟನೆ ಮುಖಂಡರನ್ನು ಸತೀಶ ಭೇಟಿಯಾಗಿ, ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು. ಗೋಕಾಕ ನಗರದ ನ್ಯಾಯಾಲಯಕ್ಕೆ ಭೇಟಿ ನೀಡಿದ ಸತೀಶ್, ವಕೀಲರ ಸಂಘದ ಪದಾಧಿಕಾರಿಗಳನ್ನು ಭೇಟಿಯಾದರು. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಹೋದರ ಲಖನ್ರನ್ನು ಬೆಂಬಲಿಸುವಂತೆ ಮತಯಾಚನೆ ಮಾಡಿದರು. ಇತ್ತ ಲಖನ್ ಜಾರಕಿಹೊಳಿ ಕೂಡ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಕ್ಷೇತ್ರದ ಅಭಿವೃದ್ಧಿ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡಲು ತಮಗೆ ಮತ ನೀಡುವಂತೆ ಕೇಳಿದರು.
ರಮೇಶ್ ಜಾರಕಿಹೊಳಿಗೆ ಅಂಬೀರಾವ್ ಸಾಥ್:
ಗೋಕಾಕ್ ಕ್ಷೇತ್ರದ ರಣಕಣಕ್ಕೆ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದು, ಇಷ್ಟು ದಿನ ತೆರೆಮರೆಯಲ್ಲಿ ರಣತಂತ್ರ ರೂಪಿಸುತ್ತಿದ್ದ ಅಂಬೀರಾವ್ ಇಂದು ಅಖಾಡಕ್ಕೆ ಇಳಿದಿದ್ದು ವಿಶೇಷವಾಗಿತ್ತು. ಸತೀಶ್, ಲಖನ್ಗೆ ಸೆಡ್ಡು ಹೊಡೆದಿದ್ದು, ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರಿಗೆ ಅಂಬೀರಾವ್ ಸಾಥ್ ಕೊಟ್ಟಿದ್ದಾರೆ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಅಂಬೀರಾವ್ ಪಾಟೀಲ ಕ್ಷೇತ್ರದ ಜಮಾತ್ಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಇತ್ತ ರಮೇಶ್ ಜಾರಕಿಹೊಳಿ ಘಟಪ್ರಭಾದಲ್ಲಿ, ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ್ ಕತ್ತಿ ಅಂಕಲಗಿ ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದರು.