ಬೆಳಗಾವಿ : ರಮೇಶ ಜಾರಕಿಹೊಳಿ ಸಿಡಿ ವಿಚಾರ ಚುನಾವಣೆ ಮೇಲೆ ಯಾವುದೇ ರೀತಿಯ ಪ್ರಭಾವ ಬೀರೋದಿಲ್ಲ. ಅದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆ ಮಾಡುತ್ತಿದೆ. ಪಕ್ಷದ ಅಭ್ಯರ್ಥಿ ಆಗಿ ನಾನು ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಒಂದೊಳ್ಳೆ ಅವಕಾಶ ಕೊಟ್ಟಿದೆ. ಖುಷಿಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಕಳೆದ 20 ವರ್ಷಗಳ ಹಿಂದೆ ಕಳೆದುಕೊಂಡ ಸೀಟನ್ನು ಮತ್ತೆ ಮರಳಿ ಪಡೆಯಲು ಕಾಂಗ್ರೆಸ್ ಪಕ್ಷಕ್ಕೆ ಸುವರ್ಣ ಅವಕಾಶ ಸಿಕ್ಕಿದೆ. ಗೆಲ್ಲಲು ಪ್ರಯತ್ನ ಮಾಡುತ್ತೇನೆ. ಸೋಮವಾರದಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಸಿದ್ದರಾಮಯ್ಯ, ಡಿಕೆಶಿ, ಎಸ್ ಆರ್ ಪಾಟೀಲ್ ಸೇರಿ ಮುಂಬೈ ಕರ್ನಾಟಕ ಭಾಗದ ಮುಖಂಡರು ಬರುತ್ತಾರೆ ಎಂದರು.
ಪರ್ಯಾಯ ನಾಯಕರಿಲ್ಲ ನೀವೇ ಸ್ಪರ್ಧಿಸಿ ಎಂದಿದ್ದರು : ಲೋಕಸಭಾ ಉಪಚುನಾವಣೆಗೆ ಪಕ್ಷದ ಆದೇಶದಂತೆ ಸ್ಪರ್ಧೆ ಮಾಡುತ್ತಿದ್ದೇನೆ. ಸೋಮವಾರ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆಗೆ ಸ್ಪರ್ಧಿಸಲು ಹಿಂದೇಟು ಹಾಕಿಲ್ಲ. ನಾನು ಯಾವತ್ತೂ ಇಂಟ್ರೆಸ್ಟ್ ಇಲ್ಲ ಅಂತಾ ಎಲ್ಲಿಯೂ ಹೇಳಿಲ್ಲ. ಬೇರೆ ಬೇರೆ ವಿಚಾರಗಳ ಬಗ್ಗೆ ಹೇಳಲು ದೆಹಲಿಗೆ ಹೋಗಿದ್ದೇನೆ ಎಂದರು.
ಜಿಲ್ಲೆಯಲ್ಲಿ ಪರ್ಯಾಯ ನಾಯಕರಿಲ್ಲ ನೀವೇ ಸ್ಪರ್ಧೆ ಮಾಡಬೇಕೆಂದು ನಮ್ಮ ನಾಯಕರು ತಿಂಗಳ ಮುಂಚೆಯೇ ಹೇಳಿದ್ದರು. ಹೀಗಾಗಿ, ನಾನು ಮಾನಸಿಕವಾಗಿ ಸಿದ್ಧನಾಗಿದ್ದೆ. ಟಿಕೆಟ್ ಘೋಷಣೆ ಅಷ್ಟೇ ಬಾಕಿ ಇತ್ತು. ಟಿಕೆಟ್ ಘೋಷಣೆ ಆಗಿದೆ. ನಾನು ಕೂಡ ಒಪ್ಪಿಗೆ ನೀಡಿದ್ದೇನೆ ಎಂದರು.
ಬಿಜೆಪಿಗೆ ಅಭ್ಯರ್ಥಿ ಅನುಕಂಪ ಆಗಬಹುದು. ಆಗದೆಯೂ ಇರಬಹುದು. ಎಷ್ಟರಮಟ್ಟಿಗೆ ಆಗಲಿದೆ ಎಂಬುವುದನ್ನು ಹೇಳಲಿಕ್ಕೆ ಆಗೋದಿಲ್ಲ. ನಾವು ಮಾತ್ರ ಪಕ್ಷದ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ. ಮೋದಿ ಸರ್ಕಾರದ ದುರಾಡಳಿತದ ವಿರುದ್ಧ ಜನರಲ್ಲಿ ಮತ ಕೇಳುತ್ತೇವೆ.
ಇದರ ಜೊತೆಗೆ ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಕೃಷಿ ಕಾಯ್ದೆ, ಬೆಲೆ ಏರಿಕೆ ಸೇರಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು, ನಮ್ಮ ವಿಚಾರಗಳನ್ನಿಟ್ಟುಕೊಂಡು ಮತದಾರರ ಬಳಿ ಹೋಗುತ್ತೇವೆ ಎಂದರು.
ಇದನ್ನೂ ಓದಿ: 'ಸಿಡಿ ತಗೊಂಡು ನಾನೇನ್ ಮಾಡ್ಲಿ, ನನಗೆ ವಯಸ್ಸಾಗಿದೆ ನಡೀರಿ'