ಬೆಳಗಾವಿ: ದಕ್ಷಿಣ ಕರ್ನಾಟಕದ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಇತ್ತೀಚೆಗೆ ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ಈಗ ಮತ್ತೊಂದು ಬೃಹತ್ ಪಾದಯಾತ್ರೆಗೆ ಸಜ್ಜಾಗಿದೆ. ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾದಾಯಿ ಯೋಜನೆ ಜಾರಿ ಸಂಬಂಧ ನಡೆಯಲಿರುವ ಪಾದಯಾತ್ರೆ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಮಹಾದಾಯಿ ಯೋಜನೆ ಜಾರಿಗಾಗಿ ಪಾದಯಾತ್ರೆ ನಡೆಸಲಾಗುವುದು ಎಂದರು.
ನರಗುಂದದಿಂದ ಮಹಾದಾಯಿ ಉಗಮಸ್ಥಾನ ಕಣಕುಂಬಿವರೆಗೆ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆ ಸಂಬಂಧ ಶೀಘ್ರದಲ್ಲಿಯೇ ರೂಪುರೇಷೆ ಸಿದ್ಧಗೊಳ್ಳಲಿದೆ. ಮೇಕೆದಾಟು ಯೋಜನೆ ಜಾರಿಗೆ ನಡೆದ ಪಾದಯಾತ್ರೆ ಸಕ್ಸಸ್ ಆಗಿದೆ. ಸರ್ಕಾರದ ಗಮನ ಸೆಳೆಯಲು ನಮ್ಮ ಪಾದಯಾತ್ರೆ ಯಶಸ್ವಿಯಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಮೇಯರ್ ಆಯ್ಕೆ ವಿಳಂಬ- ಸತೀಶ್ ವ್ಯಂಗ್ಯ..
ಬೆಳಗಾವಿ ಮಹಾನಗರದ ಮೇಯರ್-ಉಪಮೇಯರ್ ಆಯ್ಕೆ ವಿಳಂಬಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ನಗರದಲ್ಲಿ ಮೇಯರ್- ಉಪಮೇಯರ್ ಇಲ್ಲ ಅಂತ ಯಾರು ಹೇಳುತ್ತಿದ್ದಾರೆ. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮೇಯರ್, ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಉಪಮೇಯರ್. ಸರ್ಕಾರವೇ ಈ ಸಂಬಂಧ ಅನಧಿಕೃತ ಘೋಷಣೆ ಮಾಡಿದೆ. ಇಬ್ಬರೂ ನಾಯಕರಿಗೆ ಗೌನ್ ಹಾಕುವುದೊಂದೇ ಬಾಕಿ ಇದೆ. ಬಿಜೆಪಿ ಸರ್ಕಾರ ಇರುವ ತನಕ ಇವರೇ ಮೇಯರ್-ಉಪಮೇಯರ್. ಉಳಿದ ಪಾಲಿಕೆ ಸದಸ್ಯರು ಚಹಾ, ಬಿಸ್ಕೆಟ್ ಸೇವಿಸಲು ಬರಬೇಕಷ್ಟೇ ಎಂದು ವ್ಯಂಗ್ಯವಾಡಿದರು.
ಸತೀಶ್ ಜಾರಕಿಹೊಳಿ ದ್ವಂದ್ವ ಹೇಳಿಕೆ..
ಎಪಿಎಂಸಿಯೂ ನಡೆಯಲಿ, ಖಾಸಗಿ ಮಾರುಕಟ್ಟೆಯೂ ನಡೆಯಲಿ. ಖಾಸಗಿ ಮಾರುಕಟ್ಟೆ ಯಾರ ನಿಯಂತ್ರಣದಲ್ಲೂ ಇಲ್ಲ. ಸರ್ಕಾರಕ್ಕೂ ಖಾಸಗಿ ಮಾರುಕಟ್ಟೆಯಿಂದ ತೆರಿಗೆ ಪಾವತಿ ಆಗಲ್ಲ. ಎಪಿಎಂಸಿಗೆ ತರಕಾರಿ ಹೋಗದಂತೆ ತಡೆಯುವ ಯತ್ನ ನಡೆಯುತ್ತಿದೆ ಎಂದು ಬೆಳಗಾವಿಯಲ್ಲಿ ಎರಡು ತರಕಾರಿ ಮಾರುಕಟ್ಟೆಗಳ ಕಾರ್ಯನಿರ್ವಹಣೆ ಸಂಬಂಧ ಸತೀಶ್ ಜಾರಕಿಹೊಳಿ ದ್ವಂದ್ವ ಹೇಳಿಕೆ ನೀಡಿದರು.
ಎಪಿಎಂಸಿ ಉಳಿಸಲು ಕ್ರಮ ಕೈಗೊಳ್ಳಲು ಡಿಸಿಗೆ ಮನವಿ ಮಾಡಿದ್ದೇವೆ. ಆರು ತಿಂಗಳವರೆಗೆ ಕಾಯೋಣ. ಖಾಸಗಿ ಮಾರುಕಟ್ಟೆ ಹೇಗೆ ನಡೆಯುತ್ತದೆ ಎಂಬುದು ತಿಳಿಯುತ್ತದೆ. ಎರಡೂ ಮಾರುಕಟ್ಟೆ ನಡೆಯಲಿ ಎಂಬುದು ನಮ್ಮ ಆಗ್ರಹ. ರೈತರಿಗೆ ಶೋಷಣೆ ಆಗಬಾರದು. ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಹೇಳಿದರು.
ಓದಿ: ಹುಬ್ಬಳ್ಳಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮಹಿಳೆ ಸಾವು.. ಕಿಮ್ಸ್ ವಿರುದ್ಧ ಸಾರ್ವಜನಿಕರ ಆಕ್ರೋಶ