ಬೆಳಗಾವಿ: ಬಿಜೆಪಿಯವರು ಹಿಂದೂ-ಮುಸ್ಲಿಂರನ್ನು ಒಡೆದು, ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಹಿಂದುತ್ವವನ್ನು ಬಿಜೆಪಿ ಪಕ್ಷದವರು ಅಜೆಂಡಾವನ್ನಾಗಿ ಮಾಡಿಕೊಂಡಿದ್ದಾರೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆಯ ಅವಶ್ಯಕತೆ ಇರಲಿಲ್ಲ. ಕಾನೂನು ಮುಂದಿಟ್ಟುಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಕಾಯ್ದೆಯ ವಿರುದ್ಧ ಇಡೀ ದೇಶವೇ ಪ್ರತಿಭಟಿಸುತ್ತಿದೆ ಎಂದರು. ಕಾಂಗ್ರೆಸ್ ಯಾರನ್ನೂ ದಾರಿ ತಪ್ಪಿಸುತ್ತಿಲ್ಲ. ಅನೇಕ ಪ್ರತಿ ಪಕ್ಷಗಳು ಬೀದಿಗಳಿದು ಹೋರಾಡುತ್ತಿವೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ್ರೆ ಇಡೀ ರಾಜ್ಯವೇ ಹೊತ್ತಿ ಉರಿಯುತ್ತೆ ಎಂದು ಯು.ಟಿ. ಖಾದರ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಬಿಜೆಪಿ ನಾಯಕರು ಬಾಯಿಗೆ ಬಂದ ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಪ್ರಸನ್ನಾನಂದ ಸ್ವಾಮೀಜಿ, ಬಿಜೆಪಿ ಸರ್ಕಾರಕ್ಕೆ ಎರಡು ತಿಂಗಳು ಗಡುವು ಕೊಟ್ಟಿದ್ದರು. ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ಇನ್ನೂ ಸ್ವಲ್ಪ ದಿನ ಕಾದು ನೋಡುತ್ತೇವೆ. ಅಂತಿಮವಾಗಿ ಕಳೆದ ಬಾರಿಯಂತೆ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದರು. ಸ್ವಾಮೀಜಿ ನೇತೃತ್ವದಲ್ಲಿ ಶೀಘ್ರವೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಇನ್ನು ಮಹಾದಾಯಿ ವಿಚಾರವಾಗಿ ಮಾತನಾಡಿ, ಮೂರು ಕಡೆ ಬಿಜೆಪಿ ಸರ್ಕಾರವಿದ್ದು, ಮಹಾದಾಯಿ ಯೋಜನೆ ಜಾರಿಗೆಗೆ ಪ್ರಯತ್ನಿಸಬೇಕು ಎಂದರು. ಎನ್‌ಓಸಿ ಕೊಟ್ಟಿದ್ದನ್ನೇ ಕೇಂದ್ರ ವಿಥ್ ಡ್ರಾ ಮಾಡಿಕೊಂಡಿದೆ. ಕೇಂದ್ರ ಸರ್ಕಾರ ಕರ್ನಾಟಕದ ಪರ ಇಲ್ಲ. ಕೇಂದ್ರ ಸಚಿವರು, ಸಂಸದರು ಈ ಕುರಿತು ಯಾರು ಮಾತಾಡುತ್ತಿಲ್ಲ ಎಂದರು.