ಬೆಳಗಾವಿ: ಖಾನಾಪುರ ತಾಲೂಕಿನ ಅಂಗನವಾಡಿಯಲ್ಲಿ ಆಕಸ್ಮಿಕವಾಗಿ ಬಿಸಿ ಸಾರು ಬಿದ್ದು, ತೀವ್ರವಾಗಿ ಗಾಯಗೊಂಡಿರುವ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಶುಕ್ರವಾರ ಸಂಜೆ ಬೆಂಗಳೂರಿನಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಚಿವರು, ನೇರವಾಗಿ ನಗರದ ಕೆಎಲ್‌ಇ ಆಸ್ಪತ್ರೆಗೆ ತೆರಳಿ ಮಕ್ಕಳನ್ನು ಭೇಟಿ ಮಾಡಿದರು.
ತಾಲೂಕಿನ ಗೋಲ್ಯಾಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬಿಸಿ ಸಾರಿನ ಪಾತ್ರೆ ಬಿದ್ದು, ಮೂರು ಮಕ್ಕಳು ಮತ್ತು ಅಂಗನವಾಡಿ ಸಹಾಯಕಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಗೆ ಭೇಟಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ, ಮಕ್ಕಳು ಸಂಪೂರ್ಣ ಗುಣಮುಖರಾಗುವವರೆಗೆ ಚಿಕಿತ್ಸೆಯನ್ನು ಮುಂದುವರಿಸುವುದರ ಜತೆಗೆ ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಇಲಾಖೆಯ ವತಿಯಿಂದ ಪಾವತಿಸಲಾಗುವುದು ಎಂದು ಪಾಲಕರಿಗೆ ಭರವಸೆ ನೀಡಿದ್ದಾರೆ.
ಮಕ್ಕಳ ಚಿಕಿತ್ಸೆ ಕುರಿತು ವೈದ್ಯರ ಜತೆ ಚರ್ಚಿಸಿದ ಅವರು, ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸುವಂತೆ ತಿಳಿಸಿದರು. ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗುವರೆಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.