ನಿಪ್ಪಾಣಿ: ಕ್ಷೇತ್ರದ ಪ್ರಪ್ರಥಮ ಶಾಸಕಿ ಎಂಬ ಇತಿಹಾಸ ಸೃಷ್ಟಿಸಿದ್ದ ಶಶಿಕಲಾ ಜೊಲ್ಲೆ ಇದೀಗ ಅಲ್ಲಿನ ಮೊದಲ ಸಚಿವೆ ಎಂಬ ದಾಖಲೆಯನ್ನೂ ಬರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಶಶಿಕಲಾ ಜೊಲ್ಲೆ ಬಿಜೆಪಿಯಿಂದ ನೇರವಾಗಿ ವಿಧಾನಸಭಾ ಚುನಾವಣಾ ಕಣಕ್ಕಿಳಿದಿದ್ದ ಅವರು ಮೊದಲ ಪ್ರಯತ್ನದಲ್ಲೇ ಸೋಲು ಅನುಭವಿಸಿದ್ದರು. ಆದರೆ ಧೈರ್ಯಗೆಡದೆ ಸಮಾಜಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಾಕಾಸಾಹೇಬ ಪಾಟೀಲ್ ವಿರುದ್ಧ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು.
ಗಡಿ ಪ್ರದೇಶವಾದ ಅಲ್ಲಿನ ಕನ್ನಡ ಹಾಗೂ ಮರಾಠಿ ಭಾಷಿಕರಿಬ್ಬರ ಬೆಂಬಲಗಳಿಸಿ 2018ರ ಚುನಾವಣೆಯಲ್ಲೂ ವಿಜೇತರಾಗಿ 2ನೇ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ನಿಪ್ಪಾಣಿಯಲ್ಲಿ ಕಮಲ ಅರಳಿಸಿದ ಖ್ಯಾತಿ ಶಶಿಕಲಾ ಜೊಲ್ಲೆ ಅವರಿಗೆ ಸಲ್ಲುತ್ತದೆ.
ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರು. ಈಗ ಇವರ ಪತ್ನಿ ಶಶಿಕಲಾ ಜೊಲ್ಲೆ ಸಚಿವರಾಗಿದ್ದು, ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ತುಂಬೆಲ್ಲಾ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
49 ವರ್ಷದ ಶಶಿಕಾಲ ಅಣ್ಣಾ ಸಾಹೇಬ್ ಜೊಲ್ಲೆ ಮೂಲತಃ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಮೂರು ಬಾರಿ ಚುನಾವಣೆ ಎದುರಿಸಿ, ಎರಡು ಬಾರಿ ಗೆದ್ದಿರುವ ಶಶಿಕಲಾ ಅವರು ಯಡಿಯೂರಪ್ಪ ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಗಡಿ ಭಾಗದ ನಿಪ್ಪಾಣಿ, ಚಿಕ್ಕೋಡಿಯಲ್ಲಿ ಶೈಕ್ಷಣಿಕ ಸಂಸ್ಥೆಗಳು, ಸಹಕಾರಿ ಬ್ಯಾಂಕ್‌ಗಳನ್ನು ಹೊಂದಿದ್ದಾರೆ. ಪಿಯುಸಿ ವ್ಯಾಸಂಗ ಮಾಡಿರುವ ಶಶಿಕಲಾ ಜೊಲ್ಲೆ ಅವರು, ಬಿಜೆಪಿಯ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.