ಬೆಳಗಾವಿ :ಬುಡಾ (belgaum universal development authority) ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ಆಗಿ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತ ಗೂಳಪ್ಪ ಹೊಸಮನಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೈ ಬಿಡಲಾಗಿದೆ.
ಅವಧಿಗೂ ಮುನ್ನವೇ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ದಿಢೀರ್ ಬದಲಾವಣೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಶಾಸಕ ಅಭಯ್ ಪಾಟೀಲ್ ಆಪ್ತ ಸಂಜಯ್ ಬೆಳಗಾಂವಕರ್ ಅವರನ್ನು ನೇಮಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಬುಡಾ ಕಚೇರಿಯಲ್ಲಿ ಸಂಜಯ್ ಬೆಳಗಾಂವಕರ್ಗೆ ಹೂಗುಚ್ಛ ನೀಡಿ ಶಾಸಕ ಅಭಯ್ ಪಾಟೀಲ್ ಅಭಿನಂದಿಸಿದರು.
ಬಳಿಕ ಮಾತನಾಡಿದ ಶಾಸಕ ಅಭಯ್ ಪಾಟೀಲ್, ಸಂಜಯ್ ಬೆಳಗಾಂವಕರ್ ಅವರನ್ನು ನೂತನ ಬುಡಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇವರು 30 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ, ಬೆಳಗಾವಿ ನಗರದ ಬಿಜೆಪಿ ಅಧ್ಯಕ್ಷರಾಗಿ, ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪಕ್ಷ ಇಂದು ಅವರನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕ ಮಾಡಿದೆ. ಇಷ್ಟು ದಿನ ಬುಡಾದಲ್ಲಿ ಅಭಿವೃದ್ಧಿ ಮಂದಗತಿಯಲ್ಲಿದ್ದು, ಇನ್ನು ಮುಂದೆ ಅಭಿವೃದ್ಧಿ ವೇಗ ಪಡೆಯುತ್ತದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅನೇಕ ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ನೂತನ ಅಧ್ಯಕ್ಷರು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಸಂಜಯ್ ಬೆಳಗಾಂವಕರ್ ಅವರನ್ನು ಬುಡಾ ಅಧ್ಯಕ್ಷರನ್ನಾಗಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ನಿರ್ಮಲಾ ಕುಮಾರ್ ಸುರಾನಾಗೆ ಅಭಿನಂದಿಸುತ್ತೇನೆ ಎಂದರು.
ಶಾಸಕರ ಜೊತೆ ಮುಸುಕಿನ ಗುದ್ದಾಟ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ ಹಾಗೂ ಸ್ಥಳೀಯ ಶಾಸಕರ ಮಧ್ಯೆ ಶೀತಲ ಸಮರ ತಾರಕಕ್ಕೇರಿತ್ತು. ಬಿಎಸ್‌ವೈ ಆಪ್ತ ಗೂಳಪ್ಪ ಹೊಸಮನಿ ಹಾಗೂ ಬೆಳಗಾವಿ ನಗರ ವ್ಯಾಪ್ತಿಯ ಇಬ್ಬರು ಬಿಜೆಪಿ ಶಾಸಕರ ಮಧ್ಯೆ ಮುಸುಕಿನ ಗುದ್ದಾಟ ನಡೆದಿತ್ತು.
ಸತತ ಎರಡು ಬಾರಿ ಬುಡಾ ಸಭೆಗೆ ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್ ಗೈರಾಗಿದ್ದರು. ಬುಡಾ ಅಧ್ಯಕ್ಷರ ಪದಚ್ಯುತಿಯೊಂದಿಗೆ ಕಮಲ ನಾಯಕರ ನಡುವಿನ ಫೈಟ್ ವ್ಯಾಪಕವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಸಿಎಂ ಜಾತಿ ಮೇಲೆ, ನಾವು ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ: ಡಿ ಕೆ ಶಿವಕುಮಾರ್