ಬೆಳಗಾವಿ: ಕೆರೆ ನಿರ್ಮಾಣ ಯೋಜನೆ ಪ್ರಧಾನಮಂತ್ರಿಗಳ ಕನಸಿನ ಯೋಜನೆಯಾಗಿದೆ. ಇದು ರೈತರಿಗೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿರುವುದರಿಂದ ಪ್ರತಿ ಪಂಚಾಯತ್ಗಳಲ್ಲೂ ಕಡ್ಡಾಯವಾಗಿ ಒಂದು ಕೆರೆ ನಿರ್ಮಾಣ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ. ಎಸ್. ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಹಮ್ಮಿಕೊಂಡ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ಗಳಿಂದ ತೆಗೆದುಕೊಂಡಿರುವ ಕ್ರಮಗಳು ಹಾಗೂ ವಿವಿಧ ವಿಷಯಗಳ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಹೊಂಡಗಳಿಂದ ರೈತರಿಗೆ ಹೆಚ್ಚಿನ ಪ್ರಯೋಜನ ಇರುವುದರಿಂದ ಕೃಷಿಹೊಂಡಗಳ ನಿರ್ಮಾಣದ ನಿಗದಿತ ಗುರಿ ಸಾಧನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಗುರಿ ಸಾಧನೆ ಆಗದಿರುವುದಕ್ಕೆ ಕಾರಣಗಳು ಪತ್ತೆ ಮಾಡಬೇಕು. ಸಮುದಾಯ ಆಧಾರಿತ ಕಾಮಗಾರಿ ಸಾಧ್ಯವಾಗದಿದ್ದರೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡು ಗುರಿ ತಲುಪಬೇಕು. ಜಲಜೀವನ ಮಿಷನ್ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗಳನ್ನು ಕಾಲಮಿತಿ ನಿಗದಿಪಡಿಸಿಕೊಂಡು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು ಎಂದರು.
ಗ್ರಾ ಪಂ ಸದಸ್ಯರಿಗೆ ಲಸಿಕೆ ನೀಡಲು ಸೂಚನೆ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಸದಸ್ಯರಿಗೆ ಕೋವಿಡ್ ನಿರೋಧಕ ಲಸಿಕೆಯನ್ನು ನೀಡಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು. ಕೋವಿಡ್ನಿಂದ ನಿಧನರಾಗಿರುವ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆದಷ್ಟು ಬೇಗನೇ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್. ಕೆ. ಅತೀಕ್, ನರೇಗಾ ಯೋಜನೆಯಡಿ ಜಿಲ್ಲೆಯಾದ್ಯಂತ ಕೃಷಿಹೊಂಡ, ಶೌಚಾಲಯ, ಶಾಲಾ ಕಂಪೌಂಡ್ ಮತ್ತಿತರ ಕಾಮಗಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೆತ್ತಿಕೊಂಡು ಉತ್ತಮ ಕೆಲಸ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅರಣ್ಯೀಕರಣ ಯೋಜನೆಯಡಿ ಬರೀ ಸಸಿಗಳನ್ನು ನೆಟ್ಟರೆ ಸಾಲದು, ಅವುಗಳ ಪೋಷಣೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವಿ, ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ 32.15 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ ನಿಗದಿತ ಗುರಿಯ ಶೇ.25 ರಷ್ಟು ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ 247 ಹೊಸ ಕೆರೆಗಳ ನಿರ್ಮಾಣ ಮಾಡಲಾಗುತ್ತಿದ್ದು,ಕಾಮಗಾರಿ ಸ್ಥಳದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 418 ಗ್ರಾಮಗಳು ಕೋವಿಡ್ ಮುಕ್ತ: ಸದ್ಯಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಇಳಿಮುಖವಾಗಿದೆ. 1303 ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಕೋವಿಡ್ ಮಾರ್ಗಸೂಚಿ ಪಾಲನೆ ಹಾಗೂ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 418 ಗ್ರಾಮಗಳನ್ನು ಕೋವಿಡ್ ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ತಿಳಿಸಿದರು. ನಿರಂತರ 10 ದಿನಗಳ ಕಾಲ ಸೋಂಕು ಪತ್ತೆಯಾಗದ ಗ್ರಾಮಗಳನ್ನು ಕೋವಿಡ್ ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ ಎಂದು ವಿವರಿಸಿದರು.
ಕಿತ್ತೂರು ತಾಲೂಕು ಪ್ರತ್ಯೇಕ ಎಂದು ಗುರುತಿಸಲು ಒತ್ತಾಯ: ಕಿತ್ತೂರು ತಾಲೂಕು ಘೋಷಣೆಯಾಗಿ ಹಲವಾರು ವರ್ಷ ಕಳೆದರೂ ಯಾವುದೇ ಯೋಜನೆ ರೂಪಿಸುವಾಗ ಕಿತ್ತೂರು ಪ್ರತ್ಯೇಕ ತಾಲೂಕು ಎಂದು ಪರಿಗಣಿಸುತ್ತಿಲ್ಲ. ಇದರಿಂದ ಕಿತ್ತೂರು ಸೌಲಭ್ಯ ವಂಚಿತವಾಗುತ್ತಿದೆ. ಆದ್ದರಿಂದ ಕಿತ್ತೂರು ತಾಲೂಕು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡ ಅಧಿಕಾರಿಗಳಿಗೆ ಹೇಳಿದರು.
ಓದಿ: ರಾಜ್ಯಪಾಲರು ಮಧ್ಯಪ್ರವೇಶಿಸಿ ನಿಷ್ಕ್ರಿಯ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು: ಸಿದ್ದರಾಮಯ್ಯ