ಚಿಕ್ಕೋಡಿ: ಅನ್ಲಾಕ್ ಆದರೂ ಸಹ ರೈಲು ಇನ್ನೂ ಹಳಿಗೆ ಬಾರದ ಕಾರಣ ಗ್ರಾಮೀಣ ಭಾಗದ ಜನರಿಗೆ ಕೈಗೆಟುಕುತ್ತಿದ್ದ ಮೂಲ ಸೌಲಭ್ಯಗಳು ಈಗ ದುಬಾರಿಯಾಗುವ ಮೂಲಕ ಅಟ್ಟಕ್ಕೇರಿ ಕುಳಿತಿವೆ. ರೈಲು ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಜನರು ದುಬಾರಿ ಬೆಲೆ ತೆತ್ತು ತಮಗೆ ಬೇಕಾದ ಅವಶ್ಯಕ ವಸ್ತಗಳನ್ನು ಖರೀದಿ ಮಾಡುವಂತಾಗಿದೆ.
ಕೇವಲ 10ರಿಂದ 50 ರೂ. ದರದಲ್ಲಿ ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದ ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಮುಟ್ಟಿ ಬರುತ್ತಿದ್ದ ಜನರಿಗೆ ಈಗ ಸಾರಿಗೆ ಬಿಸಿ ತಟ್ಟಿದೆ. ಖಾಸಗಿ ವಾಹನಗಳಿಗೆ ಸಾವಿರಾರು ರೂ. ತೆತ್ತು ಓಡಾಡುವ ಪರಿಸ್ಥಿತಿ ಬಂದಿದೆ. ಜಿಲ್ಲೆಯ ಅರ್ಧ ಭಾಗದ ಜನರು ದೈನಂದಿನ ವ್ಯವಹಾರಗಳಿಗೆ ರಸ್ತೆ ಸಾರಿಗೆ ಅವಲಂಬಿಸಿದ್ದರೆ, ಇನ್ನರ್ಧ ಭಾಗದ ಜನರು ರೈಲ್ವೆ ನೆಚ್ಚಿಕೊಂಡಿದ್ದಾರೆ. ರೈಲುಗಳ ಮೂಲಕ ದಕ್ಷಿಣ ಮಹಾರಾಷ್ಟ್ರದ ನಂಟು ಹೊಂದಿದ್ದ ಚಿಕ್ಕೋಡಿ, ಗೋಕಾಕ್, ರಾಯಬಾಗ, ಕುಡಚಿ ತಾಲೂಕುಗಳ ವ್ಯಾಪ್ತಿಯ ಜನರಿಗೆ ಈಗ ರಸ್ತೆ ಸಾರಿಗೆ ಅವಲಂಬನೆ ಕಷ್ಟವಾಗುತ್ತಿದೆ.
ಈ ಮೊದಲು 25 ರೂ.ನಲ್ಲಿ ಜಿಲ್ಲಾ ಕೇಂದ್ರ ಬೆಳಗಾವಿಗೆ ಬರುತ್ತಿದ್ದ ರಾಯಬಾಗ, ಕುಡಚಿ, ಚಿಕ್ಕೋಡಿ ಭಾಗದ ಜನ ಈಗ ನೂರಾರು ರೂ. ಖರ್ಚು ಮಾಡಬೇಕಾಗಿದೆ. ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಸಾಗಾಣಿಕೆಯನ್ನು ರೈತರು ರೈಲನ್ನು ಅವಲಂಬಿಸಿದ್ದು, ಈಗ ರೈಲು ಸಂಚಾರ ಬಂದ್ ಆದ ಹಿನ್ನೆಲೆ ರೈತರು ಸಹ ಪರದಾಡುವಂತಾಗಿದೆ. ರೈತರು ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಘಟಪ್ರಭಾ, ಬೆಳಗಾವಿ ಮತ್ತು ಮಹಾರಾಷ್ಟ್ರದ ಮಿರಜ್, ಸಾಂಗಲಿ ಮಾರುಕಟ್ಟೆಗಳಿಗೆ ಕೊಂಡೊಯ್ದು ಲಾಭ ಗಳಿಸುತ್ತಿದ್ದರು. ರೈಲುಗಳ ಮೂಲಕ ಸಾಗಿಸುವ ದಿನಗಳಲ್ಲಿ ಇವೆಲ್ಲಾ ದುಬಾರಿಯಾಗಿರಲಿಲ್ಲ. ಆದರೆ ಈಗ ಸಾವಿರಾರು ರೂ. ಕೊಟ್ಟು ಹೋಗಬೇಕಾಗಿದೆ. ಹೀಗಾಗಿ ರೈತರು ತರಕಾರಿ ಸಾಗಾಣಿಕೆ ಮಾಡುವಲ್ಲಿ ಹೆಚ್ಚಾಗಿ ಆಸಕ್ತಿ ತೋರಿಸುತ್ತಿಲ್ಲ.
ಗಡಿ ಭಾಗದ ಜನರು ಹೆಚ್ಚಾಗಿ ಮಹಾರಾಷ್ಟ್ರದ ಆಸ್ಪತ್ರೆಗಳನ್ನು ಅವಲಂಬಿಸಿದ್ದು, ರೈಲುಗಳ ಮೂಲಕ ಅತಿ ಕಡಿಮೆ ಖರ್ಚಿನಲ್ಲಿ ಹೋಗಿ ಚಿಕಿತ್ಸೆ ಪಡೆದು ಬರುತ್ತಿದ್ದರು. ಈಗ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲದ ಕಾರಣದಿಂದ ಖಾಸಗಿ ವಾಹನಗಳಿಗಾಗಿಯೇ ಸಾರ್ವಜನಿಕರು ಸಾವಿರಾರು ರೂ. ಖರ್ಚು ಮಾಡುತ್ತಿದ್ದಾರೆ. ಇದರ ಜೊತೆಗೆ ಸರ್ಕಾರಿ ನೌಕರರಿಗೂ ಸಹ ತೊಂದರೆಯಾಗುತ್ತಿದೆ.