ಚಿಕ್ಕೋಡಿ: ಯಮಕನಮರಡಿ ಗ್ರಾಮದ ಹೊರವಲಯದಲ್ಲಿ ಬರುವ ಯಮಕನಮರಡಿ- ಹಂಚಿನಾಳ ಒಳರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ರೈತರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಬಿಜೆಪಿ ಮುಖಂಡ ರವಿ ಹಂಜಿ ಮಾತನಾಡಿ, ಯಮಕನಮರಡಿ - ಹಂಚಿನಾಳ ರಸ್ತೆಯಲ್ಲಿ ಹಲವು ಹಳ್ಳಿಗಳ ರೈತರು, ಸಾರ್ವಜನಿಕರು ಪ್ರತಿನಿತ್ಯ ಸಂಚಾರ ಮಾಡುತ್ತಾರೆ. ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ನಿತ್ಯ ಜನಪ್ರತಿನಿಧಿಗಳಿಗೆ ಇಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈ ರಸ್ತೆ ನಿರ್ಮಾಣ 15 ದಿನಗಳ ಒಳಗೆ ಆಗದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ - 4 ರ ಮೇಲೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣವು ಅಪೂರ್ಣವಾಗಿದೆ. ಯಮಕನಮರಡಿ ಗ್ರಾಮ ಪಂಚಾಯಯತ್ನಲ್ಲಿ ಪದೇಪದೇ ಪಿಡಿಒ ವರ್ಗಾವಣೆಯಿಂದ ನಿರ್ದಿಷ್ಟವಾಗಿ ಯಾವುದೇ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹಂಚಿ ಆರೋಪಿಸಿದರು.
ಬಿಜೆಪಿ ಯುವ ಮುಖಂಡ ಮಾರುತಿ ಅಷ್ಟಗಿ, ಪಾರೇಶ ಮಲಾಜಿ, ಈರಣ್ಣಾ ಹಾಲದೇವರಮಠ, ಮಹಾವೀರ ನಾಶಿಪುಡಿ, ಈರಣ್ಣಾ ಗುರವ, ಬಸವರಾಜ ಶೇಖನವರ, ಸಂತೋಷ ಮಲಾಜಿ ಹಾಗೂ ಮತ್ತಿತರ ರೈತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.