ಬೆಳಗಾವಿ: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆಗಳಿಗೆ ನೀಡಿರುವ ಆ್ಯಂಬುಲೆನ್ಸ್ ಮೇಲಿನ ಜನಪ್ರತಿನಿಧಿಗಳ ಫೋಟೊ ತೆರವಿಗೆ ಆಗ್ರಹಿಸಿ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಸರ್ಕಾರದ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ಎರಡನೇ ಅಲೆ ಹೆಚ್ಚಾದ ಕಾರಣ ರಾಜ್ಯದಲ್ಲಿ ಆ್ಯಂಬುಲೆನ್ಸ್ ಅಭಾವ ಎದುರಾಗಿತ್ತು. ಸೋಂಕಿತರಿಗೆ ತಕ್ಷಣವೇ ವೈದ್ಯಕೀಯ ಉಪಚಾರಕ್ಕಾಗಿ ಆ್ಯಂಬುಲೆನ್ಸ್ ಖರೀದಿಸಿ ಆಸ್ಪತ್ರೆಗಳಿಗೆ ನೀಡಿರುವ ಜನಪ್ರತಿನಿಧಿಗಳ ಕಾರ್ಯ ಶ್ಲಾಘನೀಯ. ಆದರೆ ರಾಜ್ಯದ ಜನರು ಪಾವತಿಸಿದ ತೆರಿಗೆ ಹಣವನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಹಂಚಿರಲಾಗುತ್ತದೆ. ತೆರಿಗೆ ಹಣದಲ್ಲಿ ಖರೀದಿಸಿ ನೀಡಿರುವ ಆ್ಯಂಬುಲೆನ್ಸ್ ಮೇಲೆ ಏಕೆ ಜನಪ್ರತಿನಿಧಿಗಳ ಫೋಟೋ ಅಂಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಜನರ ತೆರಿಗೆ ಹಣದಲ್ಲಿ ಜನಪ್ರತಿನಿಧಿಗಳು ಪ್ರಚಾರ ಪಡೆಯುತ್ತಿರುವುದಕ್ಕೆ ಅಧಿಕಾರಿಗಳು ಬ್ರೇಕ್ ಹಾಕಬೇಕು. ಪ್ರದೇಶಾಭಿವೃದ್ಧಿ ನಿಧಿಯಡಿ ಕೈಗೊಂಡ ಕೆಲಸಗಳಿಗೆ ಫೋಟೊ ಹಾಕದಂತೆ ಸರ್ಕಾರದ ಆದೇಶವೇ ಇದೆ. ಹೀಗಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಆ್ಯಂಬುಲೆನ್ಸ್ ಮೇಲಿನ ಫೋಟೊ ತೆರವುಗೊಳಿಸಬೇಕು ಎಂದು ಗಡಾದ್ ಸರ್ಕಾರವನ್ನು ಆಗ್ರಹಿಸಿದ್ದಾರೆ.