ಸಂಗೊಳ್ಳಿಯಲ್ಲಿ ರಾಯಣ್ಣನ ಹೋರಾಟದ ಗತವೈಭವ ಸಾರುವ 'ರಾಕ್ ಗಾರ್ಡನ್', ಸೈನಿಕ ಶಾಲೆ ನಿರ್ಮಾಣ - ಸ್ವಾತಂತ್ರ್ಯ ಹೋರಾಟಗಾರ ರಾಯಣ್ಣ ಸುದ್ದಿ
ಬೈಲಹೊಂಗಲ ತಾಲೂಕಿನ ರಾಯಣ್ಣನ ಹುಟ್ಟೂರಾದ ಸಂಗೊಳ್ಳಿ ಗ್ರಾಮದ ಹೊರವಲಯದಲ್ಲಿ ಸುಮಾರು 100 ಎಕರೆ ಭೂ ಪ್ರದೇಶದಲ್ಲಿ ಸಂಗೊಳ್ಳಿ ರಾಯಣ್ಣನ ಸೈನಿಕ ಶಾಲೆ ಮತ್ತು 10 ಎಕರೆಯಲ್ಲಿ ರಾಯಣ್ಣನ ಸಮಗ್ರ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ನಿರ್ಮಿಸಲಾಗುತ್ತಿದೆ.
ಬೆಳಗಾವಿ: ಬ್ರಿಟಿಷ್ ಸರ್ಕಾರದ ವಿರುದ್ಧ ತೊಡೆತಟ್ಟಿ ಹೋರಾಡಿ ಜೀವತೆತ್ತ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತವರೂರಲ್ಲಿ 110 ಎಕರೆ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಸೈನಿಕ ಶಾಲೆ ಹಾಗೂ ರಾಯಣ್ಣನ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ಸಿದ್ಧವಾಗುತ್ತಿದೆ. ಇದು ಎಲ್ಲರ ಕಣ್ಮನ ಸೆಳೆಯುತ್ತಿದೆ.
ಬೈಲಹೊಂಗಲ ತಾಲೂಕಿನ ರಾಯಣ್ಣನ ಹುಟ್ಟೂರಾದ ಸಂಗೊಳ್ಳಿ ಗ್ರಾಮದ ಹೊರವಲಯದಲ್ಲಿ ಸುಮಾರು 100 ಎಕರೆ ಭೂ ಪ್ರದೇಶದಲ್ಲಿ ಸಂಗೊಳ್ಳಿ ರಾಯಣ್ಣನ ಸೈನಿಕ ಶಾಲೆ ಮತ್ತು 10 ಎಕರೆಯಲ್ಲಿ ರಾಯಣ್ಣ ಸಮಗ್ರ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ನಿರ್ಮಿಸಲಾಗುತ್ತಿದೆ. ಕೊರೊನಾ ಕಾರಣಕ್ಕೆ ಬಾಕಿ ಉಳಿಸಿಕೊಂಡಿದ್ದ 87 ಕೋಟಿ ರೂ. ಅನುದಾನವನ್ನೂ ಈಗಾಗಾಲೇ ಬಿಡುಗಡೆ ಮಾಡಿ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರ ಸೂಚನೆ ಕೊಟ್ಟಿದೆ.
ಸಿದ್ದರಾಮಯ್ಯನವರ ಕಾಲದಲ್ಲಿ ಸಿದ್ಧವಾಗಿದ್ದ ಯೋಜನೆ:
ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಡೆದ ಸಚಿವ ಸಂಪುಟ ಸಭೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿತ್ತು. ಆ ವೇಳೆ ಸಂಗೊಳ್ಳಿ ಗ್ರಾಮದ ಹೊರವಲಯದಲ್ಲಿ ಒಟ್ಟು 110 ಎಕರೆ ಭೂ ಪ್ರದೇಶವನ್ನು ರಾಯಣ್ಣನ ಸೈನಿಕ ಶಾಲೆ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ನಿಗದಿಪಡಿಸಿ 267.67 ಕೋಟಿ ರೂ. ಅನುದಾನವನ್ನು ತೆಗೆದಿಡಲಾಗಿತ್ತು. ಗಾರ್ಡನ್ ಅನ್ನು ಬೆಳಗಾವಿಯ ಸುವರ್ಣಸೌಧ ನಿರ್ಮಾಣ ಮಾಡಿದ್ದ ಶಿರ್ಕೆ ಕಂಪೆನಿಗೆ ಸೈನಿಕ ಶಾಲೆಯ ಕಾಮಗಾರಿಯ ಗುತ್ತಿಗೆಯನ್ನು ನೀಡಲಾಗಿತ್ತು. ಆದರೆ ಮುಗಿಯುವ ಕೊನೆಯ ಹಂತಕ್ಕೆ ಬರುವಷ್ಟರಲ್ಲಿ ದೇಶದಲ್ಲಿ ಕೊರೊನಾ ವಕ್ಕರಿಸಿಕೊಂಡ ನಂತರ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದ್ದವು. ಸದ್ಯ ತೆಗೆದಿಟ್ಟ ಎಲ್ಲಾ ಅನುದಾನ ಬಿಡುಗಡೆ ಆಗಿರುವ ಹಿನ್ನೆಲೆ ಕಾಮಗಾರಿಗಳು ವೇಗ ಪಡೆದುಕೊಂಡಿವೆ.
ಕೊನೆಯ ಹಂತದಲ್ಲಿ ಕಾಮಗಾರಿಗಳು :
ಸಂಗೊಳ್ಳಿಯಲ್ಲಿ ಈಗಾಗಲೇ ರಾಯಣ್ಣ ಸ್ಮಾರಕ ಸೈನಿಕ ಶಾಲೆ, ರಾಕ್ ಗಾರ್ಡನ್, ಕಲ್ಯಾಣಮಂಟಪ ಮತ್ತಿತರ ಕಾಮಗಾರಿಗಳು ಹಾಗೂ ಖಾನಾಪುರ ತಾಲೂಕಿನ ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣ ಸ್ಮಾರಕ ಮ್ಯೂಸಿಯಂ (ವೀರಭೂಮಿ), ಯಾತ್ರಿ ನಿವಾಸ ನಿರ್ಮಾಣ, ರಾಯಣ್ಣ ಸ್ನಾನ ಮಾಡುತ್ತಿದ್ದ ಕೆರೆಯ ಜೀರ್ಣೋದ್ಧಾರ ಸೇರಿದಂತೆ ಇತರ ಕಾಮಗಾರಿಗಳು ಬಹುತೇಕ ಕೊನೆಯ ಹಂತ ತಲುಪಿವೆ.
ಸೈನಿಕ ಶಾಲೆಯಲ್ಲಿ ಏನೇನಿರಲಿದೆ:
70 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸೈನಿಕ ಶಾಲೆಯಲ್ಲಿ 6 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ, ಭೋಜನಾಲಯ, ಗ್ರಂಥಾಲಯ, ಶಿಕ್ಷಕರ ವಸತಿ ಗೃಹ, ಆಡಿಟೋರಿಯಂ ಹಾಗೂ ಕೆಲಸಗಾರರು ಉಳಿದುಕೊಳ್ಳಲು ಹೈಟೆಕ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಇದಲ್ಲದೇ 30 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಕ್ರೀಡಾ ಮೈದಾನ ನಿರ್ಮಿಸಲಾಗಿದ್ದು, ಒಳಾಂಗಣ ಮತ್ತು ಹೊರಾಂಗಣದಲ್ಲಿ ಬರುವ ಈಜುಕೊಳ, ಹಾರ್ಸ್ ರೈಡಿಂಗ್,ಹಾಕಿ, ಕಬಡ್ಡಿ, ವಾಲಿಬಾಲ್,ಕ್ರಿಕೆಟ್ ಅಥ್ಲೆಟಿಕ್ಸ್ ಸೇರಿದಂತೆ ಎಲ್ಲಾ ಕ್ರೀಡೆಗಳಿಗೂ ಸಂಬಂಧಿಸಿದ ಆಟದ ಮೈದಾನವನ್ನು ಸಿದ್ಧಪಡಿಸಲಾಗುತ್ತಿದೆ.
ರಾಯಣ್ಣನ ಸಮಗ್ರ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ನಿರ್ಮಾಣ:
ಸೈನಿಕ ಶಾಲೆಯ ಎದುರಿಗೆ ಸುಮಾರು 10 ಎಕರೆ ಪ್ರದೇಶದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಗ್ರ ಜೀವನ ಚರಿತ್ರೆ ಹಾಗೂ ಕಿತ್ತೂರು ಚೆನ್ನಮ್ಮರ ಜೀವನದ ಘಟನೆಗಳನ್ನು ಸಾರುವ 1,600ಕ್ಕೂ ಹೆಚ್ಚಿನ ಮೂರ್ತಿಗಳನ್ನು ವಿನ್ಯಾಸಗೊಳಿಸಿ ರಾಕ್ ಗಾರ್ಡನ್ ನಿರ್ಮಿಸಲಾಗುತ್ತಿದೆ. ಇದರ ಹೊಣೆಯನ್ನು ಉತ್ಸವ ರಾಕ್ ಗಾರ್ಡನ್ ವಿನ್ಯಾಸಕ ಟಿ.ಬಿ.ಸೋಲಬಕ್ಕನವರ ವಹಿಸಿಕೊಂಡಿದ್ದಾರೆ. ಗಾರ್ಡನ್ನಲ್ಲಿ ಸಂಗೊಳ್ಳಿ ರಾಯಣ್ಣನ ಹೋರಾಟದ ಕುರಿತಾಗಿರುವ ಮೂರ್ತಿಗಳು, ಗರಡಿ ಮನೆ, ಕುಸ್ತಿ ಮೈದಾನ, ವೀರಭದ್ರ ದೇವಸ್ಥಾನ, ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳು ಸೇರಿದಂತೆ ಇಡೀ ಸಂಗೊಳ್ಳಿ ರಾಯಣ್ಣನ ಹೋರಾಟದ ಇತಿಹಾಸದ ಚಿತ್ರಣವನ್ನೇ ಮೂರ್ತಿಗಳ ರೂಪದಲ್ಲಿ ಕಣ್ತುಂಬಿಕೊಳ್ಳಬಹುದು. ಸದ್ಯ ರಾಕ್ ಗಾರ್ಡನ್ ಕಾಮಗಾರಿ ವೇಗ ಪಡೆದುಕೊಂಡಿದ್ದರೂ ಪೂರ್ಣಗೊಳ್ಳಲು ಸಾಕಷ್ಟು ತಿಂಗಳುಗಳು ಹಿಡಿಯಲಿವೆ. ಹೀಗಾಗಿ ಆದಷ್ಟು ಬೇಗ ಗಾರ್ಡನ್ ಕಾಮಗಾರಿಯನ್ನು ಮುಗಿಸುವ ಮೂಲಕ ಪ್ರವಾಸಿಗರಿಗೆ ಅವಕಾಶ ನೀಡಬೇಕೆಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
ಹಳ್ಳಿಗಳ ಅಭಿವೃದ್ಧಿಗೆ ಪೂರಕ:
ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರಮಟ್ಟ ಸೈನಿಕ ಶಾಲೆ ನಿರ್ಮಿಸುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಸಂಪನ್ಮೂಲಗಳ ದೃಷ್ಟಿಯಿಂದ ದೊಡ್ಡಮಟ್ಟದ ಶಿಕ್ಷಣ ಸಂಸ್ಥೆಗಳು ನಗರ ಪ್ರದೇಶಗಳಲ್ಲಿ ಹೆಚ್ಚಿರುತ್ತವೆ. ಆದರೆ ಕ್ರಾಂತಿಕಾರಿ ನೆಲದ ಜೊತೆಗೆ ಪುಟ್ಟ ಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸೈನಿಕ ಶಾಲೆಯಿಂದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಲಿದ್ದು, ಬೀದಿಬದಿ ವ್ಯಾಪಾರಿಗಳ ಜೊತೆಗೆ ಸಣ್ಣಪುಟ್ಟ ಉದ್ಯಮಗಳು ಬೆಳವಣಿಗೆಗೆ ಸಹಕಾರಿ ಆಗಲಿವೆ. ಹೀಗಾಗಿ ನಗರ ಪ್ರದೇಶಕ್ಕೆ ಸೀಮಿತವಾದ ಶಿಕ್ಷಣ ಸಂಸ್ಥೆಗಳನ್ನು ಗ್ರಾಮೀಣ ಪ್ರದೇಶಕ್ಕೂ ಕೊಂಡ್ಯೊಯುವ ಕೆಲಸವನ್ನು ಸರ್ಕಾರ ಮಾಡಬೇಕು. ಅದರಲ್ಲಿ ಸ್ಥಳೀಯ ಮಕ್ಕಳಿಗೆ ಆದ್ಯತೆ ನೀಡುವ ಕೆಲಸವನ್ನು ಮಾಡಬೇಕಿದೆ.
ಸಂಗೊಳ್ಳಿ ರಾಯಣ್ಣ ಹೋರಾಟದ ಹಾದಿ:
ಬ್ರಿಟಿಷರ ವಿರುದ್ಧ ಹೋರಾಡಿ ಜೀವತೆತ್ತ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಇತಿಹಾಸ ಕೆದಕಿ ನೋಡಿದ್ರೆ ಕಾಕತಾಳೀಯ ಎಂಬಂತೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ 1796 ಆ.15ರಂದು ಸಂಗೊಳ್ಳಿ ರಾಯಣ್ಣನ ಜನ್ಮದಿನ, ರಾಯಣ್ಣ ಹುತಾತ್ಮನಾಗಿರುವ ದಿನ 1831 ಜ. 26ರಂದು ಭಾರತ ಗಣರಾಜ್ಯ ದಿನವೆಂದು ಘೋಷಣೆ ಮಾಡಿರುವುದು ಕಾಕತಾಳೀಯ.