ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯೋಧರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಕ್ರಾಸ್ ಬಳಿ ನಡೆದಿದೆ. ಬೈಲಹೊಂಗಲ ತಾಲೂಕಿನ ಕೆಬಿ ಪಟ್ಟಿಹಾಳ ಗ್ರಾಮದ ಸಂಜು ಕರೆಪ್ಪನವರ (32), ದಿಲಾವರ ನದಾಫ (26) ಮೃತ ದುರ್ದೈವಿಗಳು.
ಬೆಳವಡಿ ಗ್ರಾಮದಿಂದ ಕೆ.ಬಿ.ಪಟ್ಟಿಹಾಳ ಗ್ರಾಮದ ಕಡೆಗೆ ಹೊರಟಿದ್ದ ಯೋಧರ ಬೈಕ್ಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ವೇಗದಲ್ಲಿದ್ದ ಲಾರಿ ಹೊಡೆತಕ್ಕೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಯೋಧರು ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ವಾರವಷ್ಟೇ ರಜೆಗೆಂದು ತಮ್ಮೂರಿಗೆ ಬಂದಿದ್ದರು.
ಇತ್ತೀಚೆಗಷ್ಟೇ ಯೋಧ ದಿಲಾವರ ನದಾಫ ಅವರ ನಿಶ್ಚಿತಾರ್ಥವಾಗಿತ್ತು. ಇನ್ನು ಮೃತ ಯೋಧರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.