ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಸಮೀಪದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ.
ಹುಕ್ಕೇರಿ ತಾಲೂಕಿನ ರಾಜನಕಟ್ಱಿ ಗ್ರಾಮದ ಬಸವರಾಜ ಡುಮ್ಮನಾಯಿಕ (23) ಹಾಗೂ ದುರ್ಗಪ್ಪಾ ಗೂಂಡ್ಯಾಗೋಳ (24) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ.
ಬೆಳಗಾವಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಈ ಇಬ್ಬರೂ ಕೆಲಸ ಮುಗಿಸಿ ಸ್ವಗ್ರಾಮಕ್ಕೆ ಮರಳುತ್ತಿದ್ದರು. ಈ ವೇಳೆ ಲಾರಿಯೊಂದು ಬೈಕ್ ಹಿಂಬದಿ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ. ಲಾರಿಯು ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಹೊರಟಿತ್ತು ಎಂದು ತಿಳಿದುಬಂದಿದೆ.
ಅಪಘಾತ ನಡೆದ ತಕ್ಷಣವೇ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.